ಜಮ್ಮು ಕಾಶ್ಮೀರದಲ್ಲಿ ಉಗ್ರರ ಹೆಡೆಮುರಿ ಕಟ್ಟಲು ಭಾರತೀಯ ಭದ್ರತಾ ಪಡೆ ಕಾರ್ಯಾಚರಣೆ ಮುಂದುವರೆಸಿದ್ದು, ಕಾರ್ಯಾಚರಣೆ ವೇಳೆ ಲಷ್ಕರ್ ಏ ತೊಯ್ಬಾ ಕಮಾಂಡರ್ ಸೇರಿ ಮೂವರು ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಶೋಪಿಯಾನ್ ನಲ್ಲಿ ಓರ್ವ ಉಗ್ರ ಹತನಾಗಿದ್ರೆ, ಇನ್ನಿಬ್ಬರು ಉಗ್ರರು ಕುಪ್ವಾರಾದಲ್ಲಿ ಭದ್ರಯಾ ಸಿಬ್ಬಂದಿಯ ಗುಂಡೇಟಿಗೆ ಪ್ರಾಣ ಬಿಟ್ಟಿದ್ದಾರೆ.
ಶೋಪಿಯಾನ್ ಜಿಲ್ಲೆಯ ಚಿತ್ರಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಉಗ್ರರು ಹಾಗೂ ಭದ್ರತಾ ಪಡೆಯ ನಡುವೆ ನಡೆದ ಸಂಘರ್ಷದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದ್ದಾರೆ. ಇದಕ್ಕೆ ಭದ್ರತಾ ಪಡೆ ಸಿಬ್ಬಂದಿಗಳು ಪ್ರತಿದಾಳಿ ನಡೆಸುವ ಮೂಲಕ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ. ಇನ್ನೂ ಘಟನಾ ಸ್ಥಳದಲ್ಲಿ 6 ಸುತ್ತು ಬುಲೆಟ್ ನ ಪಿಸ್ತೂಲ್, ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ ಹಾಗೂ ನಾಲ್ಕು ಚೀನೀ ನಿರ್ಮಿತ ಗ್ರೆನೇಡ್ ಗಳು ಪತ್ತೆಯಾಗಿವೆ.