ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ನಗರದ ಸುಬ್ರಹ್ಮಣ್ಯಪುರದಲ್ಲಿ ನಡೆದಿದೆ. ಗಣಿ ಭೂ ವಿಜ್ಞಾನ ಇಲಾಖೆಯ (Department of Mines and Geology) ಉಪ ನಿರ್ದೇಶಕಿಯಾಗಿದ್ದ ಪ್ರತಿಮಾ (Prathima) ಸಾವನ್ನಪ್ಪಿದ ಸರ್ಕಾರಿ ಅಧಿಕಾರಿ ಎನ್ನಲಾಗಿದೆ. ಇವರು ತೀರ್ಥಹಳ್ಳಿ ಮೂಲದವರಾಗಿದ್ದು, ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರ ಹತ್ತಿರದ ಕುವೆಂಪು ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಶನಿವಾರ ರಾತ್ರಿ ಪ್ರತಿಮಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರತಿಮಾ ಅವರ ಸಹೋದರ ಕರೆ ಮಾಡಿದಾಗ ಸ್ವೀಕರಿಸದ ಹಿನ್ನೆಲೆಯಲ್ಲಿ ಅವರು ಮನೆಯ ಬಳಿ ಬಂದಾಗ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪೊಲೀಸ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಪ್ರತಿಮಾ ಅವರನ್ನು ಕಾರು ಚಾಲಕ ನಿವಾಸಕ್ಕೆ ತಂದು ಬಿಟ್ಟಿದ್ದ. ಪ್ರತಿಮಾ ಅವರ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಾಗಿದ್ದಾರೆ. ಆದರೆ, ಈ ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.