ಗದಗ: ಅಳಿಯನೊಬ್ಬ ತನ್ನ ಸೋದರ ಮಾವನ ಮನೆಗೆ ಕನ್ನ ಹಾಕಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾಲೂಕಿನ ಮಾಗಡಿ ಗ್ರಾಮದ ಅಶೋಕ ಪಲ್ಲೇದ ಎಂಬುವವರ ಮನೆಯಲ್ಲಿಯೇ ಕಳ್ಳತನ ನಡೆದಿತ್ತು. ವಿಜಯ ಕಳ್ಳಿ ಕಳ್ಳತನ ಮಾಡಿರುವ ಕಳ್ಳ ಅಳಿಯ. ಅಶೋಕ ಅವರ ಮಗನಿಗೆ ಅಪಘಾತವಾಗಿತ್ತು. ಹೀಗಾಗಿ ಕುಟಂಬಸ್ಥರೆಲ್ಲ ಆಸ್ಪತ್ರೆಯಲ್ಲಿದ್ದರು. ಇದನ್ನೇ ಲಾಭವಾಗಿಸಿಕೊಂಡ ಆರೋಪಿ, ರಾತ್ರಿ ವೇಳೆ ಇಡೀ ಊರಿನ ಕರೆಂಟ್ ಕಟ್ ಮಾಡಿ, ಮಾವನ ಮನೆಗೆ ನುಗ್ಗಿ 5 ಲಕ್ಷ ನಗದು, 240 ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದ.
ಈ ಕುರಿತು ಅಶೋಕ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳ್ಳತನದ ಹಣವನ್ನು ವಿಜಯ ಹಾಗೂ ಆತನ ಸ್ನೇಹಿತ ರವಿ ಮಜಾ ಮಾಡಿ ಖಾಲಿ ಮಾಡಿದ್ದಾರೆ. ಗೋವಾ, ಕ್ಯಾಸಿನೋ, ಹುಬ್ಬಳ್ಳಿ, ಜೂಜು, ಐಪಿಎಲ್ ಬೆಟ್ಟಿಂಗ್ ಆಡಿ, ಸಿಕ್ಕ ಸಿಕ್ಕಲ್ಲಿ ಸುತ್ತಾಡಿ ಹಣ ಖಾಲಿ ಮಾಡಿದ್ದಾರೆ. ಸದ್ಯ ಆರೋಪಿಗಳಿಂದ 120 ಗ್ರಾಂ ಚಿನ್ನ ಮಾತ್ರ ಉಳಿದಿದ್ದು, ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.