ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರೋಗಿಗೆ ವೈದ್ಯ ಥಳಿಸಿರುವ ಘಟನೆಯೊಂದು ವೈರಲ್ ಆಗಿದ್ದು, ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಚೀನಾದಲ್ಲಿ ಈ ಘಟನೆ ನಡೆದಿದೆ. 82 ವರ್ಷದ ಮಹಿಳೆಯೊಬ್ಬರು ಕಣ್ಣಿನ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರೋಗಿಯು ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಅವರದ್ದೇ ಆದ ಭಾಷೆಯಲ್ಲಿ ಮಾತನಾಡುತ್ತಿದ್ದರು. ಇದು ವೈದ್ಯರಿಗೆ ಅರ್ಥವಾಗುತ್ತಿರಲಿಲ್ಲ. ಇದರಿಂದ ಕೋಪಗೊಂಡ ವೈದ್ಯರು ರೋಗಿಗೆ ಥಳಿಸಿದ್ದಾರೆ ಎನ್ನಲಾಗಿದೆ. ರೋಗಿಯ ತಲೆಗೆ ಮೂರು ಬಾರಿ ವೈದ್ಯ ಹೊಡೆದಿದ್ದಾರೆ. ಇದು ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ವೈದ್ಯನನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದೆ.
ಆಘಾತಕಾರಿ ಘಟನೆಯು 2019 ರಲ್ಲಿ ಚೀನಾದ ಗೈಗಾಂಗ್‌ನಲ್ಲಿರುವ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಬಿಬಿಸಿ ವರದಿ ಮಾಡಿದೆ. ಸಂಪೂರ್ಣ ಘಟನೆಯನ್ನು ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗೆ ಅರವಳಿಕೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಏನು ಹೇಳಿದರೂ ರೋಗಿಗೆ ಅರ್ಥವಾಗುತ್ತಿರಲಿಲ್ಲ. ಕಣ್ಣುಗಳನ್ನು ಆ ಕಡೆ ಈ ಕಡೆ ಚಲಿಸುತ್ತಿದ್ದರು. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಅರವಳಿಕೆಯಿಂದಾಗಿ ಮಂಪರಿದ್ದ ಕಾರಣ ರೋಗಿ ತಮ್ಮ ಕಣ್ಣುಗಳನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿದ್ದರು. ಸ್ಪರ್ಶಿಸಿದರೆ ಸೋಂಕಿಗೆ ಕಾರಣವಾಗಬಹುದು ಎಂದು ಹೊಡೆದಿದ್ದೇನೆ ಎಂದು ವೈದ್ಯ ಹೇಳಿದ್ದಾರೆ.