ರಾಮನಗರ: ಬಿಜೆಪಿ-ಜೆಡಿಎಸ್ (BJP-JDS) ಮಾಡುತ್ತಿರುವುದು ಪಾದಯಾತ್ರೆಯಲ್ಲ, ಅದು ಪಾಪ ವಿಮೋಚನಾ ಯಾತ್ರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ವಿಚಾರವಾಗಿ, ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ. ಇದು ಅವರ ಪಾಪ ವಿಮೋಚನಾ ಯಾತ್ರೆಯಾಗಿದೆ. ಬಿಜೆಪಿ-ಜೆಡಿಎಸ್ ಕುಟುಂಬದವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ತಮ್ಮ ಪಾಪಗಳನ್ನು ಜನರ ಮುಂದೆ ಇಡಲು ಈ ರೀತಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಬಿಜೆಪಿಯಯವರು ಕುಮಾರಸ್ವಾಮಿಗೆ (H.D Kumaraswamy ) ಪ್ರಶ್ನೆ ಮುಂದಿಟ್ಟಿದ್ದರು. ಮೊದಲು ಅದಕ್ಕೆ ಕುಮಾರಸ್ವಾಮಿ ತಮ್ಮ ದೋಸ್ತಿಯ ಪಾದಯಾತ್ರೆಯಲ್ಲಿಯೇ ಉತ್ತರ ನೀಡಲಿ. ಶಾಸಕ ಯತ್ನಾಳ್, ಮಾಜಿ ಸಿಎಂ ಬಿಎಸ್‍ವೈ ಹಾಗೂ ಅವರ ಮಗ ವಿಜಯೆಂದ್ರಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮ್ಮ ಪಾಪ ವಿಮೋಚನೆ ಪಾದಯಾತ್ರೆಯಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ಗುಡುಗಿದ್ದಾರೆ.
ರೈತನ ಮಗ ಪಾಪ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ. ಹುಟ್ಟಿದ ಕರು ಎಲ್ಲಾ ಗೂಳಿ ಆಗಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ರೈತರಾಗಲು ಸಾಧ್ಯವಿಲ್ಲ. ಕುಮಾರಣ್ಣ ನಿನ್ನ ಕೈಯಲ್ಲಿ ಬಡವರಿಗೆ ಜಮೀನು ಕೊಡಲು ಆಗಲಿಲ್ಲ. ಒಂದು ಸೈಟ್ ಹಂಚಿಕೆ ಮಾಡಿಲ್ಲ. ನಾನು ಕ್ಷೇತ್ರಕ್ಕೆ ಬಂದು ಜನ ಸಂದರ್ಶನ ಮಾಡಿದಾಗ 22 ಸಾವಿರ ಜನ ಅರ್ಜಿ ಹಾಕಿದ್ದಾರೆ. ಇಲ್ಲಿಯವರೆಗೆ ನೀವು ಎಲ್ಲಿಗೆ ಹೋಗಿದ್ರಿ ಎಂದು ಪ್ರಶ್ನಿಸಿ ಗುಡುಗಿದ್ದಾರೆ.