ಲಡಾಕ್: ಭಾರತೀಯರ ತಾಳ್ಮೆಯನ್ನು ದೌರ್ಬಲ್ಯ ಎಂದು ತಿಳಿದುಕೊಳ್ಳಬೇಡಿ. ಕೊಳಲನ್ನು ನುಡಿಸುವ ಕೃಷ್ಣನನ್ನು ಪ್ರಾರ್ಥಿಸುವ ಜನರೂ ನಾವೇ, ಅದೇ ಸುದರ್ಶನ ಚಕ್ರವನ್ನು ಹೊತ್ತ ಭಗವಾನ್ ಕೃಷ್ಣನನ್ನು ಆರಾಧಿಸುವ, ಅನುಸರಿಸುವ ಜನರೂ ನಾವೇ ಎಂದು ಪ್ರಧಾನಿ ನರೇಂದ್ರ ಮೋದಿ ಲಡಾಕ್‍ನ ಗಡಿಯಲ್ಲಿ ನಿಂತು ನೆರೆಯ ಚೀನಾ ದೇಶಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಲಡಾಕ್‍ನ ಗಡಿ ಪ್ರದೇಶಕ್ಕೆ ಇಂದು ಭೇಟಿ ವಸ್ತುಸ್ಥಿತಿಯ ಖುದ್ದು ಪರಿಶೀಲನೆ ನಡೆಸಿದ ಬಳಿಕ ಯೋಧರನ್ನುದ್ದೇಶಿ ಮಾತನಾಡಿದ ಮೋದಿ, ಕುದಿಯುತ್ತಿರುವ ನಿಮ್ಮ ರಕ್ತದ ಬಿಸಿಯ ತೀವ್ರತೆ ಏನೆಂದು ಭಾರತ ಮಾತೆಯ ಶತೃಗಳಿಗೆ ಅರ್ಥವಾಗಿದೆ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದರು.
ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ. ನಿಮ್ಮ ಶೌರ್ಯದ ಬಗ್ಗೆ ವಿಶ್ವದೆಲ್ಲೆಡೆ ಮಾತನಾಡುತ್ತಿದ್ದಾರೆ. ನಿಮ್ಮ ಸಾಹಸ ಗಾಥೆ ದೇಶದ ಪ್ರತಿಯೊಂದು ಮನೆಯಲ್ಲಿಯೂ ಪ್ರತಿಧ್ವನಿಸುತ್ತಿದೆ ಎಂದರು.
ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ಮತ್ತೊಮ್ಮೆ ಗೌರವ ಸಲ್ಲಿಸುತ್ತಿದ್ದೇನೆ ಎಂದ ಪ್ರಧಾನಿ ಮೋದಿ, ನಿಮ್ಮ ಧೈರ್ಯ ನೀವಿಂದು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶ ಇರುವುದಕ್ಕಿಂತಲೂ ಎತ್ತರದಲ್ಲಿದೆ. ನೀವು ಮತ್ತು ನಿಮ್ಮ ಸಹಚರರು ತೋರಿದ ಧೈರ್ಯ ಇಡೀ ಜಗತ್ತಿಗೇ ಭಾರತದ ಶಕ್ತಿಯ ಕುರಿತಾದ ಸಂದೇಶ ಸಾರಿದೆ ಎಂದು ಹೇಳಿದ್ದಾರೆ.
ದುರ್ಬಲರು ಶಾಂತಿ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ. ಶಾಂತಿ ಸ್ಥಾಪಿಸಲು ಧೈರ್ಯವೂ ಅಗತ್ಯ. ಈಗ ವಿಸ್ತರಣೆಯ ಕಾಲ ಮುಗಿದಿದೆ. ಇದು ಅಭಿವೃದ್ಧಿಯ ಯುಗ. ಭೂಪ್ರದೇಶ ವಿಸ್ತರಣೆಗೆ ಹೊರಟವರು ಸೋಲನುಭವಿಸಿದ್ದು ಅಥವಾ ವಿರೋಧ ಎದುರಿಸಿ ಓಡಿ ಹೋದುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಪರೋಕ್ಷವಾಗಿ ಚೀನಾ ಹಾಗೂ ಪಾಕಿಸ್ತಾನಕ್ಕೆ ಟಾಂಗ್ ನೀಡಿದರು.

ಮಹಿಳಾ ಯೋಧರನ್ನೂ ನಾನು ಈ ಗಡಿಯಲ್ಲಿ ನೋಡುತ್ತಿದ್ದೇನೆ. ಯುದ್ಧಭೂಮಿಯಲ್ಲಿ ಇದು ಸ್ಫೂರ್ತಿದಾಯಕ. ಇಂದು ನಾನು ನಿಮ್ಮ ಮಹಿಮೆಯ ಬಗ್ಗೆ ಮಾತನಾಡುತ್ತಿದ್ದೇನೆ. ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಾಡಲಾಗುವ ವೆಚ್ಚವನ್ನು ಮೂರು ಪಟ್ಟು ಹೆಚ್ಚಿಸಿದ್ದೇವೆ. ಯೋಧರ ನಿವೃತ್ತಿ ವೇತನ ಹೆಚ್ಚಳಕ್ಕೆ ಒಆರ್‍ಒಪಿ ಯೋಜನೆ ಜಾರಿಗೆ ತಂದ ಸರ್ಕಾರ ನಮ್ಮದು. ಆತ್ಮನಿರ್ಭರ ಭಾರತದ ಸಂಕಲ್ಪ ನಿಮ್ಮ ತ್ಯಾಗ, ಬಲಿದಾನದಿಂದ ಮತ್ತಷ್ಟು ಗಟ್ಟಿಯಾಗಿದೆ ಎಂದು ಮೋದಿ ಯೋಧರ ಸಾಹಸವನ್ನು ಗುಣಗಾನ ಮಾಡಿದರು.








