ಬೆಂಗಳೂರು : ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುವ ಮೂಲಕ ಉಪನ್ಯಾಸಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ, ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿದೆ. ಕರೋನಾ ಸೋಂಕು ಸಮುದಾಯಕ್ಕೆ ವ್ಯಾಪಿಸುವ ಭೀತಿಯಲ್ಲಿರುವಾಗ ಬೆದರಿಕೆಯ ಅಸ್ತ್ರ ಬಳಸುವ ಮೂಲಕ ಉಪನ್ಯಾಸಕರ ಜೀವದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.
ಸೂಕ್ತ ವಸತಿ ,ಸಾರಿಗೆ ಮತ್ತು ಹೋಟೆಲ್ ಸೌಲಭ್ಯ ಇಲ್ಲದಿರುವಾಗ ಹೊರ ಜಿಲ್ಲೆಗಳಿಗೆ ಹೋಗಿ ಉಪನ್ಯಾಸಕರು ಮೌಲ್ಯಮಾಪನ ಮಾಡುವುದು ಬಲು ಕಷ್ಟ. ಯಾವುದೇ ಕನಿಷ್ಠ ಸೌಲಭ್ಯಗಳನ್ನು ಒದಗಿಸದೆ ಮೌಲ್ಯಮಾಪನಕ್ಕೆ ಒತ್ತಡ ತಂತ್ರ ಅನುಸರಿಸುತ್ತಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರನ್ನು ನಿಯೋಜಿಸುವ ಮೊದಲು ವಿಕೇಂದ್ರೀಕರಣ ವ್ಯವಸ್ಥೆಯಾಗಬೇಕು. ಡಿಡಿಪಿಐ ಗಳು, ಜಿಲ್ಲಾಧಿಕಾರಿಗಳಿಂದ ಮೌಲ್ಯಮಾಪನಕ್ಕೆ ಬರದಿದ್ದರೆ ವೇತನರಹಿತ ರಜೆ ಎಂಬ ‘ಧಮ್ಕಿ’ ಹಾಕಿಸುತ್ತಿರುವುದು ಸರ್ಕಾರದ ಅವಿವೇಕದ ಕ್ರಮವಾಗಿದೆ. ಪಿಯುಸಿ ಎಕ್ಸಾಮ್ ಮುಗಿಯಲು ಜೂನ್ 18 ರವರೆಗೆ ಕಾಲಾವಕಾಶ ಇದೆ. ಸರ್ಕಾರ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ” ಪ್ರಯೋಗ ಮಾಡಲು ಮುಂದಾಗಿರುವುದನ್ನು ತಕ್ಷಣ ಸ್ಥಗಿತ ಗೊಳಿಸುವಂತೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.








