ಬೆಂಗಳೂರು: ಕಾರು ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಟೆಕ್ಕಿ ದಂಪತಿ ಮೇಲೆ ಪಕ್ಕದ ಮನೆಯವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ನಗರದ ದೊಡ್ಡನೆಕ್ಕುಂದಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಎಎಲ್ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ದೊಡ್ಡನೆಕ್ಕುಂದಿಯ ಅಪಾರ್ಟ್ ಮೆಂಟ್ ನಲ್ಲಿದ್ದ ಸಹಿಷ್ಣು ಮತ್ತು ರೋಹಿಣಿ ದಂಪತಿ ಮೇಲೆ ಪಕ್ಕದ ಮನೆಯ ಆನಂದಮೂರ್ತಿ ಹಾಗೂ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಹಿಷ್ಣು ಮತ್ತು ರೋಹಿಣಿ ಸಾಫ್ಟವೇರ್ ಇಂಜಿನಿಯರ್. ತಿಂಗಳ ಹಿಂದೆಯಷ್ಟೇ ಇಲ್ಲಿ ಬಂದು ನೆಲೆಸಿದ್ದರು. ಆದರೆ, ಅಪಾರ್ಟ್ ಮೆಂಟ್ ನಲ್ಲಿ ವಾಹನ ನಿಲ್ಲಿಸಲು ಜಾಗವಿಲ್ಲದ ಕಾರಣ, ಅಪಾರ್ಟ್‌ಮೆಂಟ್ ಬಳಿಯ ಖಾಲಿ ಜಾಗದಲ್ಲಿತಮ್ಮ ಕಾರು ನಿಲ್ಲಿಸಿದ್ದರು. ಹೀಗಾಗಿ ತಮ್ಮ ಮನೆಗೆ ಹೋಗಲು ಅಡಚಣೆಯಾಗುತ್ತಿದೆ ಎಂದು ಅಸಮಾಧಾನಗೊಂಡಿದ್ದ ಆನಂದಮೂರ್ತಿ, ಕಾರಿನ ಟಯರ್ ಪಂಕ್ಚರ್ ಮಾಡಿದ್ದಾನೆ. ಅಲ್ಲದೆ, ಕಾರನ್ನು ಜಖಂಗೊಳಿಸಿದ್ದ.
ನಂತರ ಅವರು ಪಂಕ್ಚರ್ ಹಾಕಿಸಿ ಅಪಾರ್ಟ್ ಮೆಂಟ್ ಒಳಗೆ ಹೋಗುವಾಗ ಆನಂದ್‌ಮೂರ್ತಿ, ಅಡ್ಡಗಟ್ಟಿ ಮನಸೋಇಚ್ಛೆ ನಿಂದಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆನಂತರ ಆನಂದ್‌ಮೂರ್ತಿ ಮತ್ತು ಆತನ ಸಹೋದರ ದಂಪತಿಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ರೋಹಿಣಿ ಪತಿಯ ಮೇಲೆ ಹಲ್ಲೆನಡೆಸುತ್ತಿರುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾದಾಗ ಅವರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.