ನವದೆಹಲಿ : ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಗ್ಯಾಂಗ್ ರಾಷ್ಟ್ರೀಯ ತನಿಖಾ ದಳ(NIA) ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಐಇಡಿ (IED) ಸ್ಫೋಟಿಸಲು ಬೇಕಾಗಿದ್ದ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಐಸಿಸ್‌ನಿಂದ ಪ್ರೇರಣೆಗೊಂಡಿದ್ದ ಬಳ್ಳಾರಿ ಯುವಕ ಸುಲೈಮನ್ ಹಾಗೂ ಸಹಚರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಐಸಿಸ್ ಮಾಡ್ಯೂಲ್ (ISIS Ballari Module) ಹೆಸರಿನಿಂದ ಗುರುತಿಸಿಕೊಂಡಿದ್ದ ಈ ತಂಡ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿತ್ತು ಎಂದು ತಿಳಿದು ಬಂದಿದೆ. ಬಳ್ಳಾರಿ ಮೂಲದ ಸುಲೈಮನ್ ಬಳ್ಳಾರಿ ಘಟಕವನ್ನು ಆರಂಭಿಸಿದ್ದ. ಈ ವ್ಯಕ್ತಿಗೆ ಸೈಯ್ಯದ್ ಸಮೀರ್ ಸಹಕಾರ ನೀಡುತ್ತಿದ್ದ. ಬೆಂಗಳೂರು ಮತ್ತು ಬಳ್ಳಾರಿ, ಉ.ಕರ್ನಾಟಕದಲ್ಲಿ ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದರು ಎಂಬ ಭಯಾನಕ ವಿಚಾರ ಹೊರ ಬಿದ್ದಿದೆ.
ಜಿಹಾದ್ ಗೆ ಗಮನ ನೀಡುತ್ತಿದ್ದವರನ್ನೇ ಟಾರ್ಗೆಟ್ ಮಾಡಿ ಪಾಕಿಸ್ತಾನ, ಇರಾನ್, ಇರಾಕ್ ಪ್ರವಾಸದ ನಂತರ ಜಿಹಾದಿಗಳನ್ನಾಗಿ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಮನೆಯಲ್ಲಿ ಹಲವಾರು ವಿಧ್ವಂಸಕ ವಸ್ತುಗಳು ಪತ್ತೆಯಾಗಿವೆ.