ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್ ಕಂಪನಿಗಳ ಕಿರುಕುಳಕ್ಕೆ ಕಡಿವಾಣ ಬಿದ್ದಂತೆ ಕಾಣುತ್ತಿಲ್ಲ. ಇಲ್ಲಿನ ವಿಜ್ಞಾನ ನಗರದಲ್ಲಿರುವ ಅಪಾರ್ಟ್ ಮೆಂಟ್ ಕಂಪನಿಯೊಂದರ ಸಿಬ್ಬಂದಿ ನಿವಾಸಿಗಳಿಗೆ ಅವಾಚ್ಯವಾಗಿ ನಿಂದಿಸಿ, ಇಂಟರ್ನೆಟ್ ಸಂಪರ್ಕವನ್ನು ಕಡಿದು ಹಾಕಿ ದರ್ಪ ಮೆರೆದಿದ್ದಾರೆ.
ಈ ಸಂಬಂಧ ನಿವಾಸಿಗಳು ಈಸ್ಟ್ ಪರೇಡ್ ಜೈನ್ ಹೈಟ್ಸ್ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿರುವ ಕಂಪನಿ ವಿರುದ್ಧ ಅವಾಚ್ಯವಾಗ ನಿಂದಿಸಿ, ಇಂಟರ್ನೆಟ್ ಸಂಪರ್ಕ ಕಡಿತ ಮಾಡಿರುವುದು ಮತ್ತು ಕಳ್ಳತನ ಆರೋಪದ ದೂರು ದಾಖಲಿಸಿದ್ದಾರೆ. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ನಿವಾಸಿಗಳು ದಾಖಲಿಸಿರುವ ತಮ್ಮ ದೂರಿನಲ್ಲಿ, ಜೈನ್ ಹೈಟ್ಸ್ ಕಂಪನಿಯ ಸಿಬ್ಬಂದಿಯಾದ ವಿನೀತಾ, ಅರ್ಜುನ್, ಗುರುನಾಥ್, ಅಬ್ದುಲ್, ಮಂಜುನಾಥ, ಬಸವರಾಜ್ ಮತ್ತು ಸುಬ್ರತ್ ಮಂಡಲ್ ಅವರು ಮನೆಗಳಿಗೆ ಬಂದು ಮಾಸಿಕ ನಿರ್ವಹಣಾ (ಮೇಂಟೇನೆನ್ಸ್) ಶುಲ್ಕವನ್ನು ನೀಡುವಂತೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ, ಫ್ಲಾಟ್ ಗಳನ್ನು ಬುಕ್ ಮಾಡುವಾಗ ನೀಡಿದ್ದ ಭರವಸೆಗಳಲ್ಲಿ ಇನ್ನೂ ಅನೇಕ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ನಿರ್ವಹಣಾ ಶುಲ್ಕವನ್ನು ನೀಡುವಂತಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ. ತಮಗೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಹೊರತು ನಾವು ನಿರ್ಹವಣಾ ಶುಲ್ಕವನ್ನು ನೀಡುವುದಿಲ್ಲ ಎಂದು ಹೇಳಿದರೆ ಸಿಬ್ಬಂದಿ ನಿವಾಸಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದಲ್ಲದೇ, ವಿದ್ಯುತ್ ಸಂಪರ್ಕ, ಟಿವಿ ಕೇಬಲ್ ಸಂಪರ್ಕವನ್ನು ಕಡಿದು ಹಾಕಿದ್ದಾರೆ ಎಂದು ನಿವಾಸಿಗಳು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಇದೊಂದು ಗಂಭೀರವಾದ ಅಪರಾಧವಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ನಿವಾಸಿಗಳು ಈ ಉತ್ತರವನ್ನು ಒಪ್ಪುತ್ತಿಲ್ಲ. ಅದರ ಬದಲಿಗೆ ತಾವು ನೀಡಿದ ದೂರಿನ ಆಧಾರದಲ್ಲಿ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದಿರುವ ಹಿನ್ನೆಲೆಯಲ್ಲಿ ಹಲವಾರು ನಿವಾಸಿಗಳು ಒಟ್ಟಾಗಿ ಮಾಧ್ಯಮದ ಮೊರೆ ಹೋಗಿ, ಈ ರಿಯಲ್ ಎಸ್ಟೇಟ್ ಕಂಪನಿಯ ಹಗರಣವನ್ನು ಬಯಲಿಗೆಳೆಯಲು ಮುಂದಾಗಿದ್ದಾರೆ.