ಕೋವಿಡ್ ವೈರಸ್ ಸೃಷ್ಟಿಯಾದದ್ದು ವುಹಾನ್ ವೆಟ್ ಮಾರ್ಕೆಟ್ ನಲ್ಲಿ ಅಲ್ಲ, ಬದಲಿಗೆ ಕಮ್ಯೂನಿಸ್ಟ್ ಸರ್ಕಾರಿ ಮಿಲಿಟರಿ ಲ್ಯಾಬ್ ನಲ್ಲಿ! ಚೀನಿ ವೈರಾಲಜಿಸ್ಟ್ ಸಿಡಿಸಿದ ಸ್ಪೋಟಕ ಸತ್ಯ:
ವಾಷಿಂಗ್ಟನ್, ಅಗಸ್ಟ್ 4: ಹಾಂಗ್ ಕಾಂಗ್‌ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ವೈರಾಲಜಿ ವಿಭಾಗದ ತಜ್ಞೆ ಡಾ. ಲಿ ಮೆಂಗ್ – ಯಾನ್, ವಿಶ್ವಾದ್ಯಂತ ಅಂದಾಜು 689,000 ಜನರನ್ನು ಬಲಿ ತೆಗೆದುಕೊಂಡಿರುವ ಕೋವಿಡ್ -19 ವೈರಸ್, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಸಂಪರ್ಕ ಹೊಂದಿದ ಲ್ಯಾಬ್‌ನಿಂದ ಸೃಷ್ಟಿಯಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈಗಾಗಲೇ ಚೀನಾ ಕೊರೋನಾ ಸೋಂಕಿನ ಗಂಭೀರತೆಯನ್ನು ಆರಂಭಿಕ ಹಂತದಲ್ಲಿ ಜಗತ್ತಿನಿಂದ ಮುಚ್ಚಿಟ್ಟ ಆರೋಪವನ್ನು ಎದುರಿಸುತ್ತಿದ್ದು, ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟೇ ಅಲ್ಲ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿಯೇ ಕೊರೋನಾ ವೈರಾಣು ಮಾನವ ಸೃಷ್ಟಿ ಮತ್ತು ಇದರ ಉಗಮ ಸ್ಥಾನ ಚೀನಾದ ವುಹಾನ್ ಲ್ಯಾಬ್ ಎಂದು ಬಹಳಷ್ಟು ಬಾರಿ ಆರೋಪಿಸಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ತನ್ನ ಮೇಲಿನ ಆರೋಪಗಳನ್ನು ಸತತವಾಗಿ ನಿರಾಕರಿಸುತ್ತಾ ಬಂದಿರುವ ಚೀನಾದ ಕುತಂತ್ರವನ್ನು ಚೀನಾದಿಂದ ತಪ್ಪಿಸಿಕೊಂಡು ಬಂದು ಅಮೆರಿಕ ಸೇರಿರುವ ವೈರಾಣು ತಜ್ಞೆ ಡಾ. ಲಿ ಮೆಂಗ್-ಯಾನ್ ಅವರು ಲೈವ್‌ಸ್ಟ್ರೀಮ್ ಸಂದರ್ಶನದಲ್ಲಿ ಬಯಲು ಮಾಡಿದ್ದಾರೆ. ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಾನು ಅಧ್ಯಯನ ಮಾಡುವಾಗ ಕಂಡುಹಿಡಿದಿರುವುದಾಗಿ ಹೇಳಿರುವ ಡಾ. ಲಿ ಮೆಂಗ್-ಯಾನ್ ಈ ಸೋಂಕಿನ ಮೂಲ ಮಿಲಿಟರಿ ಲ್ಯಾಬ್ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಹೊಸ ವೈರಸ್ ಬಗ್ಗೆಗಿನ ತನ್ನ ಸಂಶೋಧನೆಗಳನ್ನು ವರದಿ ಮಾಡಿದಾಗ ಮತ್ತು ಹೆಚ್ಚಿನ ಮಾಹಿತಿಗಾಗಿ ರಹಸ್ಯ ತನಿಖೆ ನಡೆಸಲು ಈ ಕ್ಷೇತ್ರದ ಉನ್ನತ ತಜ್ಞರು ಆಗಿರುವ ತನ್ನ ಮೇಲ್ವಿಚಾರಕರ ಬಳಿ ಕೇಳಿಕೊಂಡಾಗ ಅವರು ಸಂಶೋಧನೆಯನ್ನು ನಿರ್ಲಕ್ಷಿಸಿದರು ಮತ್ತು ಚೀನಾ ಸರ್ಕಾರದ ಆಂತರಿಕ ವಿಷಯದಲ್ಲಿ ತಲೆ ಹಾಕದಂತೆ ಎಚ್ಚರಿಕೆ ನೀಡಿ ಮೌನವಾಗಿ ಇರುವಂತೆ ಸೂಚಿಸಿದರು. ಆ ಸಮಯದಲ್ಲಿ, ಚೀನಾದ ಕಮ್ಯುನಿಸ್ಟ್ ಪಕ್ಷದ ಮಿಲಿಟರಿ ಲ್ಯಾಬ್‌ನಿಂದ ವೈರಸ್ ಬಂದಿದೆ ಎಂದು ನಾನು ಸ್ಪಷ್ಟವಾಗಿ ನಿರ್ಣಯಿಸಿದ್ದೆ ಎಂದು ಡಾ ಲಿ ಹೇಳಿದ್ದಾರೆ. ವುಹಾನ್‌ನ ಮಾರುಕಟ್ಟೆಯಲ್ಲಿ ವೈರಸ್ ಹುಟ್ಟಿಕೊಂಡಿರಬಹುದು ಎಂದು ವಿಜ್ಞಾನಿಗಳು ಪ್ರಸ್ತುತ ನಂಬಿದ್ದಾರೆ. ಆದರೆ ಅಲ್ಲಿ ಅದು ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಆದರೆ ಅದರ ಸೃಷ್ಟಿಯಾಗಿರುವುದು ಚೀನಾದ ಮಿಲಿಟರಿಗೆ ಸಂಬಂಧಿಸಿದ ಲ್ಯಾಬ್ ನಲ್ಲಿ ಎಂದು ವೈರಾಣು ತಜ್ಞೆ ಡಾ. ಲಿ ಮೆಂಗ್-ಯಾನ್ ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ 40 ಕ್ಕೂ ಹೆಚ್ಚು ನಾಗರಿಕರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆಂದು ಸರ್ಕಾರಕ್ಕೆ ತಿಳಿದಿತ್ತು. ಅಷ್ಟೇ ಅಲ್ಲ ಮಾನವನಿಂದ ಮಾನವನಿಗೆ ಕೋವಿಡ್-19 ಸೋಂಕು
ಹರಡುವಿಕೆ ಈಗಾಗಲೇ ಸಂಭವಿಸುತ್ತಿದೆ ಎಂಬ ಮಾಹಿತಿ ಆ ಸಮಯದಲ್ಲೇ ಚೀನಾದ ಸರ್ಕಾರಕ್ಕೆ ಗೊತ್ತಿತ್ತು ಎಂದು ವೈರಾಣು ತಜ್ಞೆ ತಿಳಿಸಿದ್ದಾರೆ. ನಾನು ಎಲ್ಲಿ ಸತ್ಯವನ್ನು ಬಹಿರಂಗ ಪಡಿಸುತ್ತೇನೆ ಎಂಬ ಕಾರಣಕ್ಕೆ ಚೀನಾ ಸರ್ಕಾರದಿಂದ ತನ್ನ ಜೀವಕ್ಕೆ ಅಪಾಯವಿತ್ತು. ಆದ್ದರಿಂದ ಏಪ್ರಿಲ್ ನಲ್ಲಿ ನಾನು ಹಾಂಗ್ ಕಾಂಗ್ ನಿಂದ ಯುಎಸ್ ಗೆ ಪಲಾಯನ ಮಾಡಲು ನಿರ್ಧರಿಸಿದೆ ಎಂದು ಡಾ. ಲಿ ಮೆಂಗ್-ಯಾನ್ ಹೇಳಿದ್ದಾರೆ.
ಜರ್ಮನಿಯ ಗುಪ್ತಚರ ವರದಿಯು, ಈ ಹಿಂದೆ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ಕೊರೊನಾ ಸೋಂಕಿನ ಗಂಭೀರತೆಯ ಬಗೆಗಿನ ವರದಿಯನ್ನು ಜಗತ್ತಿನಿಂದ ಮುಚ್ಚಿಡುವ ವಿಚಾರದಲ್ಲಿ ಡಬ್ಲ್ಯೂ.ಎಚ್.ಒ ಮೇಲೆ ಚೀನಾ ಒತ್ತಡ ಹೇರಿತ್ತು ಎಂದು ಬಹಿರಂಗ ಪಡಿಸಿತ್ತು. ಅಷ್ಟೇ ಅಲ್ಲ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕೋವಿಡ್-19 ವೈರಸ್ ಮಾನವ ನಿರ್ಮಿತ ಎಂದು ಬಹಳಷ್ಟು ಬಾರಿ ಆರೋಪಿಸಿದ್ದರು.
ಈ ನಡುವೆ ಹಾಂಗ್ ಕಾಂಗ್ ವಿಶ್ವವಿದ್ಯಾನಿಲಯವು ಡಾ ಲಿ ಕೋವಿಡ್-19 ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡುವ ಬಗ್ಗೆ ಸಂಶೋಧನೆ ನಡೆಸಿದ್ದನ್ನು ನಿರಾಕರಿಸಿದೆ ಮತ್ತು ಅವರ ಪ್ರತಿಪಾದನೆಗಳು ಪ್ರಮುಖ ಸಂಗತಿಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದೆ.
ಯುಎಸ್‌ನ ಚೀನೀ ರಾಯಭಾರ ಕಚೇರಿ ಈ ವ್ಯಕ್ತಿಯ ಬಗ್ಗೆ ನಮಗೆ ತಿಳಿದಿಲ್ಲ ಎಂದು ಹೇಳಿದೆ.