ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಬಲೆಗೆ ಬಿದ್ದಿದೆ.
ಚಿರತೆಯನ್ನು ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದ್ದು, ಸೆರೆ ಹಿಡಿಯುವ ಸಂದರ್ಭದಲ್ಲಿ ವೈದ್ಯರ ಮೇಲೆಯೇ ಚಿರತೆ ದಾಳಿ ಮಾಡಲು ಮುಂದಾಗಿತ್ತು. ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಭಾನುವಾರ ರಾತ್ರಿ ಚಿರತೆ ಓಡಾಡುತ್ತಿತ್ತು. ರಾತ್ರಿ 11 ಗಂಟೆ ಸಂದರ್ಭದಲ್ಲಿ ಕಾಂಪೌಂಂಡ್ ಗೋಡೆ ಜಿಗಿದು ಓಡಿದ್ದನ್ನು ಪರಪ್ಪನ ಅಗ್ರಹಾರ ಲಾ ಅಂಡ್ ಆರ್ಡರ್ ಪೊಲೀಸರು ಗಮನಿಸಿದ್ದರು. ಆನಂತರ ಚಿರತೆಯ ಹೆಜ್ಜೆಗಳು ಕೂಡ ಪತ್ತೆಯಾಗಿದ್ದವು. ಅಲ್ಲದೇ, ಅಪಾರ್ಟ್ಮೆಂಟ್ ನಲ್ಲಿ ಚಿರತೆ ಮೆಟ್ಟಿಲು ಹತ್ತಿ ಹೋಗುತ್ತಿರುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಹೀಗಾಗಿ ಚಿರತೆಯ ಬಲೆಗಾಗಿ ಪೊಲೀಸರು ಮುಂದಾಗಿದ್ದರು. ಮಂಗಳವಾರ ಸಂಜೆಯವರೆಗೂ ಚಿರತೆಗಾಗಿ ಇಡೀ ಕಟ್ಟಡ ಜಾಲಾಡಿದ್ದ ಅಧಿಕಾರಿಗಳಿಗೆ ಸುಳಿವು ಸಿಕ್ಕಿರಲಿಲ್ಲ. ಆದರೆ, ಗೋಡೆಯ ವೇಲೆ ಓಡಾಡಿದ್ದ ಗುರುತು ಪತ್ತೆಯಾಗಿತ್ತು.ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿ, ಕೊನೆಗೂ ಬಂಧಿಸಿದೆ.








