ಬೆಂಗಳೂರು: ರಾಜ್ಯ ಸರ್ಕಾರವು ಈ ವಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡಲು ತೀರ್ಮಾನಿಸಿದೆ ಎನ್ನಲಾಗಿದ್ದು, ಶಾಸಕರಿಗೆ ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ಇದೆ.
ಹೀಗಾಗಿಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ಅವರು ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚಿಸಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಾಡಿದ್ದು ನಿಗಮ ಮಂಡಳಿಗೆ ಶಾಸಕರ ನೇಮಕಾತಿ ಪಟ್ಟಿ ಫೈನಲ್ ಆಗುವ ಸಾಧ್ಯತೆ ಇದೆ.
ಶಾಸಕರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ನಂತರ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಪ್ರಾಶಸ್ತ್ಯ ನೀಡಲಾಗುವುದು ಎನ್ನಲಾಗುತ್ತಿದೆ.
20 ರಿಂದ 30 ಶಾಸಕರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಶಾಸಕರಿಗೆ ನಿಗಮ ಮಂಡಳಿಗೆ ಅವಕಾಶ ನೀಡಬಾರದು ಎಂದು ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ನಾಯಕರು ಮನವಿ ಮಾಡುತ್ತಿದ್ದಾರೆ.