ಮೈಸೂರು : ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಘಟಾನುಘಟಿ ನಾಯಕರೆಲ್ಲ ರಾಜ್ಯಕ್ಕೆ ಆಗಮಿಸಿ, ಹಗಲಿರುಳು ಪ್ರಚಾರ ಕಾರ್ಯ ನಡೆಸಿದ್ದಾರೆ. ಅಷ್ಟೇ ಅಲ್ಲ, ಗೆಲ್ಲುವ ತಂತ್ರ- ಪ್ರತಿ ತಂತ್ರ ರೂಪಿಸುತ್ತಿದ್ದಾರೆ.
ಕರ್ನಾಟಕದಲ್ಲಿ (Karnataka) ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಪ್ರಧಾನಿ ಮೋದಿ (Narendra Modi) ಪಟ್ಟ ತೊಟ್ಟಂತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ (Mysuru) ಸುಮಾರು 4 ಕಿ.ಮೀವರೆಗೆ ಮೋದಿ ರೋಡ್ ಶೋ (Road Show) ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಬೃಹತ್ ಸಮಾವೇಶದ ನಂತರ ಮೈಸೂರಿನ ಓವೆಲ್ ಮೈದಾನದಲ್ಲಿ ಇಳಿದ ಮೋದಿ ಬಳಿಕ ರೋಡ್ ಶೋ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆಸಿದಂತೆ ಮೈಸೂರಿನಲ್ಲಿ ಇಂದು 4 ಕಿ.ಮೀ. ರೋಡ್ ಶೋ ನಡೆಸಿದ್ದಾರೆ. ರಸ್ತೆ ಇಕ್ಕೆಲೆಗಳಲ್ಲಿ ಕೇಸರಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ನೋಡಿ ಘೋಷಣೆ ಕೂಗಿದ್ದಾರೆ. ಅಲ್ಲದೇ, ದಾರಿಯುದ್ಧಕ್ಕೂ ಹೂಮಳೆ ಸುರಿಸಿದ್ದಾರೆ. ಹೂ ಹಾಕುವಾಗ ಅಭಿಮಾನಿಯೊಬ್ಬನ ಮೊಬೈಲ್ ಅಚಾನಕ್ ತೂರಿ ಬಂದ ಘಟನೆಯೂ ನಡೆಯಿತು. ಮೊಬೈಲ್ ಪ್ರಚಾರ ವಾಹನದ ಮೇಲೆ ಬಿದ್ದಿತ್ತು.