ಮೈಸೂರು : ಕೃಷಿಕನಾಗಿ ಅನುಭವಹೊಂದಿರುವ ತಮಗೆ ರೈತರೊಂದಿಗೆ ಇನ್ನಷ್ಟು ಬೆರೆತು ಅವರೊಂದಿಗಿದ್ದಾಗ ಕೃಷಿ ಅಭಿವೃದ್ಧಿಗೆ ಹೊಸಹೊಸ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ.ರೈತರಿಗೆ ಆತ್ಮವಿಶ್ವಾಸ ಮೂಡಿಸುವುದೇ ತಮ್ಮ ರೈತ ವಾಸ್ತವ್ಯದ ಉದ್ದೇಶ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ರೈತ ವಾಸ್ತವ್ಯ ಈ ಹಿಂದೆಯೇ ಮಾಡಬೇಕಾಗಿತ್ತಾದರೂ ಕೊರೊನಾ ಲಾಕ್ಡೌನ್‌ನಿಂದಾಗಿ ಅದು ಸಾಧ್ಯವಾಗಲಿಲ್ಲ.ಆಗ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮುವತ್ತು ಜಿಲ್ಲೆಗಳಲ್ಲಿ ಮುವತ್ತು ದಿನಗಳ ಕಾಲ ಪ್ರವಾಸ ಕೈಗೊಂಡು ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ರೀತಿಯ ತೊಂದರೆಯಾಗದಂತೆ ಲಾಕ್ಡೌನ್‌ನಿಂದ ವಿನಾಯಿತಿ ನೀಡಲಾಯಿತು. ಪರಿಣಾಮ ಈ ಬಾರಿ ಕೊರೊನಾ ಸಂಕಷ್ಟದಲ್ಲಿಯೂ ಕೃಷಿ ಚಟುವಟಿಕೆ ಸರಾಗವಾಗಿ ನಡೆದು ಬಿತ್ತನೆ ಹೆಚ್ಚುವಂತಾಗಿದೆ. ಕೃಷಿಯತ್ತ ಹೆಚ್ಚು ಗಮನ ಕೇಂದ್ರೀಕೃತವಾಗಿದೆ. ಈಗ ಕೊರೊನಾ ಸೋಂಕು ಕಡಿಮೆಯಾದ ಬಳಿಕ ರೈತ ವಾಸ್ತವ್ಯಕ್ಕೆ ಮುಂದಾಗಿದ್ದು, ರೈತರೊಂದಿಗಿನ ವಾಸ್ತವ್ಯದ ಅನುಭವ ಇನ್ನಷ್ಟು ಹೊಸಹೆಜ್ಜೆಗಳಿಗೆ ದಿಕ್ಸೂಚಿಯಾಗಲಿದೆ ಎಂದರು.
ತಮ್ಮೊಂದಿಗೆ ಕೃಷಿ ಅಧಿಕಾರಿಗಳೂ ಸಹ ವಾಸ್ತವ್ಯದಲ್ಲಿ ಇರಲಿದ್ದು, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಬಗೆಹರಿಸಬಹುದಾದ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು.ಅಲ್ಲದೇ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದು ಬಳಿಕವೂ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ಅಧಿವೇಶನದಲ್ಲಿ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ತಾವು ಸೇರಿದಂತೆ ಸರ್ಕಾರವೂ ಸಹ ಸಿದ್ಧವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡ್ರಗ್ಸ್ ಹಾವಳಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿನಿಮಾ ಕ್ಷೇತ್ರವೆನ್ನುವುದು ಗಾಜಿನಮನೆಯಿದ್ದಂತೆ. ನಟನಟಿಯರಿಗೆ ಅನುಯಾಯಿಗಳು ಹೆಚ್ಚುಮಂದಿ ಇರುತ್ತಾರೆ. ತಾವು ಸಹ ಸಿನಿಮಾರಂಗದಲ್ಲಿಯೇ ಇದ್ದವರು. ತಮ್ಮ ಕಾಲದಲ್ಲಿ ಡ್ರಗ್ಸ್ ಎಂಬುದು ಸಿನಿರಂಗದಲ್ಲಿ ಇರಲಿಲ್ಲ. ಆದರೀಗ ಆರೋಪ ಕೇಳಿಬಂದಿದೆ. ಯಾರೋ ಮಾಡಿದ ತಪ್ಪಿಗೆ ಇಡೀ ಸಿನಿಮಾರಂಗವನ್ನುದ್ದೇಶಿಸುವುದು ಸರಿಯಲ್ಲ. ರಾಜಕೀಯದವರಾಗಲೀ ಸಿನಿಯಮಾದವರಾಗಲೀ ಅಥವಾ ಇನ್ಯಾರೇ ಆಗಲೀ, ತಪ್ಪು ಮಾಡಿದರೆ ಅದು ತಪ್ಪೇ. ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಬಿ.ಸಿ.ಪಾಟೀಲ್ ಪುನರುಚ್ಚರಿಸಿದರು.