ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 2.75 ಲಕ್ಷಕ್ಕೂ ಅಧಿಕ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ.
ಸಂಸದ ಪ್ರಿಜೇಂದ್ರ ಸಿಂಗ್ ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 27,528 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
2018ರ ಜನವರಿ 1 ರಿಂದ ಈ ವರ್ಷದ ಜೂನ್ 30 ವರೆಗೆ ದೇಶದಲ್ಲಿ 2.12 ಲಕ್ಷ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದರೆ, 62 ಸಾವಿರ ಗಂಡು ಮಕ್ಕಳು ಹಾಗೂ 1.73 ಲಕ್ಷ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಈಗಾಗಲೇ 66 ಸಾವಿರ ಗಂಡು ಮಕ್ಕಳು ಸೇರಿದಂತೆ 2.4 ಲಕ್ಷ ಮಕ್ಕಳನ್ನು ರಕ್ಷಿಸಲಾಗಿದೆ. ಇದರಲ್ಲಿ 2018ಕ್ಕಿಂತ ಮೊದಲು ನಾಪತ್ತೆಯಾದ ಮಕ್ಕಳೂ ಸೇರಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 8,632 ಬಾಲಕರು ಹಾಗೂ 18,893 ಬಾಲಕಿಯರು ಕಾಣೆಯಾಗಿದ್ದಾರೆ. ಈ ಸಮಯದಲ್ಲಿ 7,163 ಬಾಲಕರು ಹಾಗೂ 14,649 ಬಾಲಕಿಯರು ಸೇರಿದಂತೆ ಒಟ್ಟು 21,817 ಮಕ್ಕಳನ್ನು ರಕ್ಷಿಸಲಾಗಿದೆ.