ನವದೆಹಲಿ: 5,8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಪರೀಕ್ಷೆಗಳನ್ನು ಮುಂದೂಡಿಲಾಗಿದೆ.
5, 8, 9 ಹಾಗೂ 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿತು. ಈ ವೇಳೆ ಬೋರ್ಡ್ ಪರೀಕ್ಷೆ ನಡೆಸದಂತೆ ತಡೆ ನೀಡಿದೆ.
ಸುಪ್ರೀಂ ಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ 5,8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಶಿಕ್ಷಣ ಇಲಾಖೆ ಮುಂದೂಡಿದೆ. ಹೈಕೋರ್ಟ್ ಏಕ ಸದಸ್ಯ ಪೀಠ ಮಾರ್ಚ್ 6 ರಂದು ಬೋರ್ಡ್ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ಅಧಿಸೂಚನೆ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಮತ್ತೆ ನಡೆಸಲು ಅನುಮತಿ ನೀಡಿತ್ತು.
ರಾಜ್ಯಾದ್ಯಂತ 45 ಸಾವಿರ ಶಾಲೆಗಳ 28 ಲಕ್ಷ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆ ಬರೆಯುತ್ತಿದ್ದು, ಸದ್ಯ ಗೊಂದಲಕ್ಕೆ ಈಡಾಗಿದ್ದಾರೆ. 11ನೇ ತರಗತಿ ಪರೀಕ್ಷೆಗಳು ಈಗಾಗಲೇ ಫೆಬ್ರವರಿ 28 ರಂದೇ ಮುಕ್ತಾಯಗೊಂಡಿವೆ. 5,8 ಮತ್ತು 9ನೇ ತರಗತಿಗಳಿಗೆ ಮಾ.11 ರಿಂದ ಪರೀಕ್ಷೆಗಳು ಆರಂಭವಾಗಿದ್ದವು.