ಇಕ್ಕೇರಿ ನಾಯಕರು, ರಾಣಿ ಚೆನ್ನಮ್ಮಾಜಿ, ಭದ್ರಯ್ಯನ ಮಠದ ಕತ್ತಿ ಬೀಸುವ ಬಯಲು ಮತ್ತು ಮಲೆನಾಡಿನ ಚರಿತ್ರೆಯ ಬಗ್ಗೆ ನಾವು ಕೇಳಿರದ ರೋಚಕ ಕಥೆಗಳು
ಇಕ್ಕೇರಿ ನಾಯಕರು ತಮ್ಮ ರಾಜಧಾನಿಯನ್ನು ಇಕ್ಕೇರಿ ಇಂದ ಬಿದನೂರಿಗೆ ಸ್ಥಳಾಂತರಿಸಿದ ನಂತರದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟು ಉಂಟಾದಾಗ ಅವರು ತಮ್ಮ ಸುರಕ್ಷತಾ ದೃಷ್ಟಿಯಿಂದ ಆಶ್ರಯಿಸಿ ಹೋಗುತ್ತಿದ್ದಿದ್ದು ಭುವನಗಿರಿದುರ್ಗಕ್ಕೆ (ಕವಲೇದುರ್ಗ ಕೋಟೆ). ಇದಕ್ಕೆ ಎರಡು ಪ್ರಮುಖ ಕಾರಣಗಳು ಇದ್ದು, ಒಂದನೆಯದಾಗಿ ಕವಲೇದುರ್ಗದ ಕೋಟೆ ಅಜೇಯ (ಅಬೇದ್ಯ) ಕೋಟೆ ಅದರ ಮೇಲೆ ವಿಜಯ ಸಾಧಿಸುವುದು ಕಷ್ಟಕರವಾಗಿತ್ತು ಮತ್ತು ಎರಡನೆಯದು ಕವಲೇದುರ್ಗ ಬಿದನೂರಿನಿಂದ ಕೇವಲ 16 ಕಿಲೋಮೀಟರ್ ದೂರದಲ್ಲಿದ್ದು ಇದರ ಮಾರ್ಗ ದುರ್ಗಮವಾದ ಕಾಡಿನ ಮಧ್ಯದಲ್ಲಿ ಹಾದು ಹೋಗುವ ಕಿರಿದಾದ ಕಣಿವೆ ಮುಖಾಂತರ ಸಾಗ ಬೇಕಿದ್ದು, ಶತ್ರು ಸೈನ್ಯವು ಇದರ ಮೂಲಕ ಹೋಗಲು ಶ್ರಮಪಡಬೇಕಾಗಿತ್ತು.
ಬಿದನೂರಿನ ಕೋಟೆಯ ಪೂರ್ವದಲ್ಲಿ ಇರುವ ಕೆರೆಯ ರಸ್ತೆಯಲ್ಲಿ ಚಲಿಸಿ ಮೊದಲು ಭುವನಗಿರಿದುರ್ಗ (ಕವಲೇದುರ್ಗ) ಬಾಗಿಲು ದಾಟಿ ನಂತರ ನಡುವಣ ಬಾಗಿಲು ದಾಟಿ ಕೊನೆಯದಾಗಿ ಹನುಮಂತನ ಬಾಗಿಲು ದಾಟಿ ಮುಂದೆ ಸಾಗಿ ಗುಡ್ಡ ಇಳಿದು ನೀರಿನ ಹಳ್ಳ (ಈ ಹಳ್ಳ ಹಿಲ್ಕುಂಚಿ ಹತ್ತಿರ ಇಳಾವತಿ ಹೊಳೆಯನ್ನು ಸೇರುತ್ತದೆ) ದಾಟಿ ದೋದುರು ಹತ್ತಿರ ಮತ್ತೆ ಗುಡ್ಡ ಹತ್ತಿ ಇಳಿದು ಯಾರ್ವೆ ಮೂಲಕ ಕವಲೇದುರ್ಗ ಕೋಟೆಯನ್ನು ತಲುಪಬಹುದಿತ್ತು. ಇನ್ನೂ ವಿಜಯನಗರ ಕಾಲದಲ್ಲಿ ವ್ಯಾಪಾರದ ದೃಷ್ಟಿಕೋನದಿಂದ ಕರಾವಳಿ ಪ್ರದೇಶದಿಂದ ಘಟ್ಟದ ಮೇಲಿನ ಅವರ ಪ್ರಮುಖ ನಗರ ಆರಗಕ್ಕೆ ಒಂದು ಪ್ರಮುಖ ರಸ್ತೆಯನ್ನು ನಿರ್ಮಾಣ ಮಾಡಿದ್ದರು (ಇದು ಇಂದಿಗೂ ಸಹಾ ಚಾಲ್ತಿಯಲ್ಲಿ ಇದೆ). ಹುಲಿಕಲ್ ಘಾಟಿ ಮುಖಾಂತರ ಬಿದನೂರು ನಗರವನ್ನು ದಾಟಿ ಮುಂದೆ ಇಳಾವತಿ ಹೊಳೆಯನ್ನು ದಾಟಿ ಹಿಲ್ಕುಂಜಿ ಮೂಲಕ ಬೇಳೂರು ದಾಟಿ ಮುಂದೆ ಸಾಗಿ ಗುಡ್ಡವನ್ನು ಹತ್ತಿ ಇಳಿದರೆ ಒಂದು ದೊಡ್ಡ ಬಯಲು ಪ್ರದೇಶ ಬರುತ್ತಿತ್ತು ಅದರ ಪಕ್ಕದಲ್ಲಿ ಇರುವ ಪುರಾತನ ಕೋದೂರು ಕಲಾನಾಥೇಶ್ವರ ದೇವಾಲಯದ ಹತ್ತಿರ ರಸ್ತೆಯು ಎರಡು ಕವಲು ಒಡೆಯುತ್ತಿತ್ತು, ಒಂದು ಆರಗ ಪೇಟೆಯ ಕಡೆ ಹೋದರೆ ಇನ್ನೊಂದು ಕವಲೇದುರ್ಗ ಕೋಟೆಯ ಕಡೆಗೆ ಹೋಗುತ್ತಿತ್ತು.
ಇನ್ನೂ ಮೇಲೆ ಪ್ರಸ್ತಾಪಿಸಿದ ವಿಶಾಲವಾದ ಬಯಲಿನಲ್ಲಿ ವಿಜಯನಗರದ ಕಾಲದಿಂದ ಬಿದನೂರಿನ ಪತನದ ವರೆಗೂ (1763) ಇಲ್ಲಿ ಸೈನಿಕರಿಗೆ (ರಾಜಮನೆತನದವರಿಗೂ ಸಹಿತ) ಶಸ್ತ್ರ ಅಭ್ಯಾಸ ತರಬೇತಿ ನೀಡುವ ಮತ್ತು ಹೊಸ ಆಯುಧಗಳನ್ನು ಪ್ರಯೋಗ ಮಾಡುವ ಪ್ರಮುಖ ತಾಣವಾಗಿತ್ತು. ಬಿದನೂರಿನ ವೀರ ರಾಣಿ ಚೆನ್ನಮ್ಮಾಜಿಯ ಕಾಲದಲ್ಲಿ ಇಲ್ಲಿ ಒಂದು ಪ್ರಮುಖ ಶಸ್ತ್ರ ಅಭ್ಯಾಸ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಅದುವೇ ಇತಿಹಾಸ ಮತ್ತು ಮಲೆನಾಡಿನ ಕಾಡಿನಲ್ಲಿ ಮುಚ್ಚಿಹೋಗಿರುವ ‘ಭದ್ರಯ್ಯನ ಮಠ’ ಮತ್ತು ಇಲ್ಲಿ ಕಲಿಸಿ ಕೊಡುತ್ತಿದ್ದ ವಿದ್ಯೆ ‘ಕತ್ತಿ ಬೀಸುವುದು’.
ಭದ್ರಯ್ಯನ ಮಠದ ಸಂಸ್ಥಾಪಕರು ಮತ್ತು ಅದರ ಇತಿಹಾಸ:-
1671ರಲ್ಲಿ ಬಿದನೂರಿನ ರಾಜ ಹಿರಿಯ ಸೋಮಶೇಖರನಾಯಕರ ಅಕಾಲಿಕ ಮರಣದ ನಂತರದಲ್ಲಿ ಮಲೆನಾಡಿನ ಈ ಪ್ರಸಿದ್ಧ ರಾಜಮನೆತನದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಗೊಳ್ಳುತ್ತದೆ. ಹಿರಿಯ ಸೋಮಶೇಖರನಾಯಕರ ಮಡದಿ ರಾಣಿ ಚೆನ್ನಮ್ಮಾಜಿ ಸತಿ ಪದ್ಧತಿಗೆ ತಿಲಾಂಜಲಿ ಹಾಡಿ ರಾಜ್ಯವನ್ನು ಆಳಲು ಮುಂದಾಗುವುದರಲ್ಲಿ ಇನ್ನೊಂದು ಬಣ ‘ಕುತ್ಸಿತ ಶಿವಪ್ಪನಾಯಕ’ ಎಂಬ ಹುಡುಗನಿಗೆ ಬಿದನೂರಿನ ಅರಮನೆಯಲ್ಲಿ ಪಟ್ಟಾಭಿಷೇಕ ಮಾಡಿ ಬಿಡುತ್ತಾರೆ. ರಾಣಿ ಚೆನ್ನಮ್ಮಾಜಿ ತನ್ನ ಸುರಕ್ಷಿತ ದೃಷ್ಟಿಯಿಂದ ತನ್ನ ಆಪ್ತ ಮಂತ್ರಿಗಳು, ಸೈನ್ಯ ಅಧಿಕಾರಿಗಳು ಮತ್ತು ಸೈನ್ಯದೊಂದಿಗೆ ಕವಲೇದುರ್ಗ ಕೋಟೆ ಸೇರುತ್ತಾಳೆ. ಕವಲೇದುರ್ಗದ ಅರಮನೆಯಲ್ಲಿ ರಾಣಿ ಚೆನ್ನಮ್ಮಾಜಿ ಪಟ್ಟಾಭಿಷೇಕ ಮಾಡಿಸಿಕೊಂಡು ಮುಂದಿನ ನಾಲ್ಕು ವರ್ಷ ಅಲ್ಲಿಂದಲೇ ರಾಜ್ಯಭಾರ ಮಾಡುತ್ತಾಳೆ. ಇಂತಹ ಸೂಕ್ಷ್ಮ ಸಮಯದಲ್ಲಿ ಕುತ್ಸಿತ ಶಿವಪ್ಪನಾಯಕ ಮತ್ತು ರಾಣಿ ಚೆನ್ನಮ್ಮಾಜಿ ಬಣದ ನಡುವೆ ನಾಲ್ಕು ವರ್ಷಗಳ ಕಾಲ ಮುಸುಕಿನ ಯುದ್ಧಗಳು ನಡೆಯುತ್ತವೆ. ಕೊನೆಗೆ ಕಾಸರಗೋಡು ತಿಮ್ಮಣ್ಣನಾಯಕ ರಾಣಿ ಚೆನ್ನಮ್ಮಾಜಿಯ ಬಣವನ್ನು ಸೇರಿದ ಮೇಲೆ ರಾಣಿ ಬಿದನೂರು ನಗರವನ್ನು ಮರಳಿ ಪಡೆದು ತದನಂತರದಲ್ಲಿ ಬಿದನೂರಿನಿಂದ ರಾಜ್ಯಭಾರ ಮಾಡುತ್ತಾಳೆ.
ಕಲ್ಯಾಣ ಗೌಡ ಬಾಂಡ್ಯ ಅವರು ಹೇಳುವ ಪ್ರಕಾರ 1671ರಿಂದ ನಾಲ್ಕು ವರ್ಷಗಳ ಕಾಲ ಕೊಡೂರಿನ ಆ ವಿಶಾಲವಾದ ಬಯಲು ಸೈನ್ಯ ಪಡೆಯ ತಾಣವಾಗಿತ್ತು. ಆ ಸೂಕ್ಷ್ಮ ಸಮಯದಲ್ಲಿ ನಡೆದ ಹಲವಾರು ಯುದ್ದಗಳಲ್ಲಿ ‘ಭದ್ರಯ್ಯ’ ಎಂಬ ಯುವಕ ತನ್ನ ಕತ್ತಿ ಬೀಸುವ ಕೈಚಳಕದಿಂದ ರಾಣಿ ಚೆನ್ನಮ್ಮಾಜಿಗೆ ವಿಜಯವನ್ನು ತಂದುಕೊಟ್ಟಿದ್ದ ಆದರೆ ಅಂತಹುದೇ ಒಂದು ಭಯಾನಕ ಮುಸುಕಿನ ಯುದ್ಧದಲ್ಲಿ ಭದ್ರಯ್ಯ ವೀರಮರಣವನ್ನು ಹೊಂದುತ್ತಾನೆ. ರಾಣಿಯ ಪ್ರಮುಖ ನಿಷ್ಠಾವಂತ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ ಬೊಕ್ಕಸದ ಸಿದ್ದಬಸವಯ್ಯ ಮತ್ತು ವೀರಮ್ಮ ದಂಪತಿಗಳ ಮಗನೇ ಈ ಮಹಾನ್ ವೀರ ‘ಭದ್ರಯ್ಯ’. ವೀರಮ್ಮ ತನ್ನ ಮಗನ ನೆನಪುಗೋಸ್ಕರ ಮತ್ತು ರಾಜ್ಯದ ಹಿತದೃಷ್ಟಿಯಿಂದ ಕತ್ತಿ ಬೀಸುವ ವಿದ್ಯೆಯನ್ನು ಹೇಳಿ ಕೊಡಲು ಮಹತ್ತಿನ ಮಠವನ್ನು ಕೊಡೂರು ಕಲಾನಾಥೇಶ್ವರ ದೇವಾಲಯದ ಪಶ್ಚಿಮದಲ್ಲಿ ಇರುವ ೪೦ ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣ ಮಾಡಿ ಅದಕ್ಕೆ ‘ಭದ್ರಯ್ಯನ ಮಠ’ ಎಂದು ನಾಮಕರಣ ಮಾಡುತ್ತಾಳೆ. ಬಿದನೂರಿನ ಅಳ್ವಿಕೆಯ ಕಾಲದಲ್ಲಿ ಧನಸ್ಸು, ಚಕ್ರ, ಕುಂತ, ಖಡ್ಗ, ಗದೆ ಮತ್ತು ಛುರಿಕಾ ಆಯುಧಗಳನ್ನು ಯುದ್ಧದಲ್ಲಿ ಉಪಯೋಗಿಸಲು ತರಬೇತಿ ನೀಡಲಾಗುತ್ತಿತ್ತು.
ಇನ್ನೂ ‘ಭದ್ರಯ್ಯನ ಮಠದಲ್ಲಿ’ ಕತ್ತಿ ಬೀಸುವ ವಿದ್ಯೆಯನ್ನೇ ಯಾಕೆ ಕಲಿಸುತ್ತಿದ್ದರು ಎಂಬುವ ಪ್ರಶ್ನೆಗೆ ಸಹಜವಾಗಿ ಎರಡು ಕಾರಣಗಳು ಕಂಡುಬರುತ್ತದೆ – ಒಂದು ಈ ಮಠವನ್ನು ಸ್ಥಾಪಿಸಿದ ಆ ಮಹಾತಾಯಿಯ ಮಗ ಒಬ್ಬ ಅಪ್ಪಟ ಕತ್ತಿ ಬೀಸುವ ಯೋಧನಾಗಿದ್ದು ಮತ್ತು ಎರಡನೆಯದು ಈ ಪ್ರದೇಶದಲ್ಲಿ ಬಹಳ ಮೊದಲಿನಿಂದಲೂ (ವಿಜಯನಗರ ಕಾಲದಿಂದಲೂ) ಕತ್ತಿ ಬೀಸುವ ವಿದ್ಯೆಯನ್ನು ನೀಡಲಾಗುತ್ತಿತ್ತು. ಇಕ್ಕೇರಿ ನಾಯಕರ ಆಳ್ವಿಕೆಯ ಕಾಲದಲ್ಲಿ ಮಠಗಳು ಕೇವಲ ಧರ್ಮ ಪ್ರಚಾರ ಅಥವಾ ಧರ್ಮ ಬೋಧನೆಗಾಗಿ ಮಾತ್ರ ಸೀಮಿತವಾಗದೆ ಅದರ ಹೊರತಾಗಿಯೂ ಅದು ಹಲವಾರು ಕಾರಣಕ್ಕಾಗಿ ಶಕ್ತಿಯ ಕೇಂದ್ರವಾಗಿತ್ತು. ನಮ್ಮ ವೇದಗಳಲ್ಲಿ 64 ವಿದ್ಯೆಗಳ ಬಗ್ಗೆ ಉಲ್ಲೇಖವಿದ್ದು ಇದನ್ನು ಬೋಧಿಸಲು ಇಂದಿನ ದಿನಗಳಲ್ಲಿ ಇರುವ ತಾಂತ್ರಿಕ, ವೈದ್ಯಕೀಯ, ವೈಜ್ಞಾನಿಕ, ಕೃಷಿ, ಸೈನ್ಯ ತರಬೇತಿ ಕಾಲೇಜುಗಳ ರೀತಿಯಲ್ಲಿ ಅಂದು ಪ್ರತ್ಯೇಕವಾದ ಮಠಗಳು ಕಾರ್ಯನಿರ್ವಯಿಸುತ್ತಿದ್ದವು. ಇದೇ ಮಾದರಿಯಲ್ಲಿ ‘ಭದ್ರಯ್ಯನ ಮಠ’ ಕತ್ತಿ ಬೀಸುವ ವಿದ್ಯೆಯನ್ನು ನೀಡಲು ಸ್ಥಾಪಿಸಲಾಗಿತ್ತು. ಇಕ್ಕೇರಿ ನಾಯಕರ ಕಾಲದಲ್ಲಿ ಎಲ್ಲಾ ಮಠಗಳಿಗೆ ರಾಜಾಶ್ರಯ ದೊರೆತ್ತಿದ್ದು ಇವುಗಳ ನಿರ್ವಹಣೆಗಾಗಿ ರಾಜರು ಅಪಾರ ಸಂಪತ್ತು ಮತ್ತು ದತ್ತಿಯನ್ನು ನೀಡುತ್ತಿದ್ದರು. ಇಷ್ಟೇ ಅಲ್ಲದೇ ಈ ಮಠಗಳಿಗೆ ಬರುತ್ತಿದ್ದ ಎಲ್ಲಾ ವಸ್ತುಗಳ ಮೇಲಿನ ಸುಂಕ ಮತ್ತು ಮಠಕ್ಕೆ ಸಂಬಂದಿಸಿದ ಎತ್ತಿನ ಗಾಡಿಗೆ ರಹದಾರಿ ಸುಂಕದಿಂದ ರಿಯಾಯಿತಿಯನ್ನು ನೀಡುತ್ತಿದ್ದು ಭದ್ರಯ್ಯನ ಮಠಕ್ಕೆ ಸಂಬಂದಿಸಿದಂತೆ ಎರಡು ತಾಮ್ರ ಶಾಸನದಲ್ಲಿ ಇದನ್ನು ನಾವು ಗಮನಿಸ ಬಹುದು. ಹಿರಿಯ ಬಸವರಾಜ ನಾಯಕರ ಕಾಲದಲ್ಲಿ (1708) ಭದ್ರಯ್ಯನ ಮಠಕ್ಕೆ ಮಡಬೂರಿನ ಹತ್ತಿರ ಇರುವ ಕುಸುಬೂರ ಗ್ರಾಮದಲ್ಲಿ ಭೂದಾನವನ್ನು ನೀಡಲಾಗಿತ್ತು ಅದೇ ರೀತಿ ಇಮ್ಮಡಿ ಸೋಮಶೇಖರ ನಾಯಕರ ಕಾಲದಲ್ಲಿ (1723) ಈ ಮಠಕ್ಕೆ ಸಾಮಾಗ್ರಿಗಳನ್ನು ತರುತ್ತಿದ್ದ ಎತ್ತಿನ ಗಾಡಿಗಳಿಗೆ ರಹದಾರಿ ಸುಂಕದಿಂದ ರಿಯಾಯಿತಿಯನ್ನು ನೀಡಲಾಗಿತ್ತು.
ಭದ್ರಯ್ಯನ ಮಠದ ಇಂದಿನ ಚಿತ್ರಣ:-
ಕೋದೂರು ಕಲಾನಾಥೇಶ್ವರ ದೇವಾಲಯದ ಪಶ್ಚಿಮಕ್ಕೆ ಇರುವ ೪೦ ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಮಠವನ್ನು ಸ್ಥಾಪಿಸಲಾಗಿತ್ತು. ಕಲಾನಾಥೇಶ್ವರ ದೇವಾಲಯದ ಪಶ್ಚಿಮಕ್ಕೆ ಇರುವ ಕಾಡಿನ (ಇಂದು ಕಾಡಾಗಿದೆ) ಮೂಲಕ ಮೆಲ್ಲನೆ ಏರುತ್ತ ಮುಂದೆ ಸಾಗಿದರೆ ಮಧ್ಯದಲ್ಲಿ ಹಿಂದಿನ ಕಾಲದ ಮೆಟ್ಟಲುಗಳನ್ನು ಕಾಣಬಹುದು. ಇನ್ನೂ ಸ್ವಲ್ಪ ದೂರ ಚಲಿಸಿದ ಮೇಲೆ ಚೌಡಿಯನ್ನು ಪೂಜಿಸುವ ಸ್ಥಳ ಬರುತ್ತದೆ ಇಲ್ಲಿಂದ ಸ್ವಲ್ಪ ದೂರ ಸಾಗಿದರೆ ಸಮತಟ್ಟಾದ ಪ್ರದೇಶ ಸಿಗುತ್ತದೆ ಅಲ್ಲೇ ಈ ಮಠದ ಹೊರ ಗೋಡೆಯನ್ನು ಕಾಣಬಹುದು. ಸುಮಾರು ೨ರಿಂದ ೩ ಎಕರೆ ಪ್ರದೇಶದಲ್ಲಿ ಮಠದ ಕಟ್ಟಡ ನಿರ್ಮಾಣವಾಗಿದ್ದು ಅದರ ಸುತ್ತಲೂ ೫ ಅಡಿ ಎತ್ತರದ ಕಲ್ಲಿನ ಸುರಕ್ಷ ಗೋಡೆಯನ್ನು ವೀಕ್ಷಿಸಬಹುದು. ಪೂರ್ವಾಭಿಮುಖವಾಗಿ ಇರುವ ಮುಖ್ಯ ದ್ವಾರವನ್ನು (ಮರದ ಬಾಗಿಲು ಕಣ್ಮರೆಯಾಗಿದ್ದು ಈಗ ಕೇವಲ ಕಲ್ಲಿನ ಚೌಕಟ್ಟು ಮಾತ್ರ ಉಳಿದಿದೆ) ಪ್ರವೇಶಿಸಿದ ನಂತರ ದೊಡ್ಡದಾದ ತೊಟ್ಟಿಯನ್ನು ಕಾಣಬಹುದು. ಈ ತೊಟ್ಟಿಯ ಮತ್ತೊಂದು ಕಡೆ ೩.೫ ಅಡಿ ಎತ್ತರದ ಗ್ರ್ಯಾನೈಟ್ ಕಲ್ಲಿನ ಕಟ್ಟಡದ ಅಡಿಪಾಯವನ್ನು ಗಮನಿಸಬಹುದು.
ಈ ಭಾಗವನ್ನು ಪ್ರವೇಶಿಸಲು ಸುಂದರವಾದ ಸಿಂಹ ಕಟಾಂಜನದ (Balustrade) ಮೆಟ್ಟಿಲುಗಳನ್ನು ಕಲ್ಪಿಸಲಾಗಿದ್ದು ಬಹುಶಃ ಇದು ಈ ಮಠದ ಮುಖ್ಯವಾದ ಭಾಗವಾಗಿತ್ತು ಎಂದು ನಾವುಗಳು ಅರಿಯಬಹುದು. ಈ ಭಾಗದಲ್ಲಿ ಸುಂದರವಾದ ಕಲ್ಲಿನ ಕಂಬಗಳು ಮತ್ತು ಅದರ ಪೀಠವನ್ನು ನೋಡಿದಾಗ ಈ ಕಟ್ಟಡಕ್ಕೆ ಅಂದಿನ ಕಾಲದಲ್ಲಿ ಹಂಚಿನ ಛಾವಣಿ ಇರುವುದು ದೃಢಪಡಿಸುತ್ತದೆ ಮತ್ತೆ ಇದಕ್ಕೆ ಸಾಕ್ಷಿ ಎಂಬಂತೆ ಆ ಪ್ರದೇಶದಲ್ಲಿ ನಮಗೆ ಸಹಸ್ರಾರು ಹೆಂಚಿನ ಚೂರುಗಳು ಸಿಕ್ಕಿದ್ದು. ಇನ್ನೂ ಆ ಕಾಲದ ಮಠಗಳಲ್ಲಿ ಅದರಲ್ಲೂ ನೂರಾರು ವಿದ್ಯಾರ್ಥಿಗಳು ಇರುವ ಮಠದಲ್ಲಿ ಶೇಖರಣೆಮಾಡ ಬೇಕಾದ ಎಲ್ಲಾ ವಸ್ತುಗಳಿಗೆ ಈ ಭದ್ರಯ್ಯನ ಮಠದಲ್ಲಿ ಸ್ಥಳಾವಕಾಶ ನೀಡಲಾಗಿತ್ತು. ಹೇರಳವಾಗಿ ಹುಲ್ಲಿನ ಸಂಗ್ರಹ, ಒಲೆಗೆ ಬೇಕಾದ ಸಾಧನಗಳು, ಬೆಲ್ಲ, ಎಲ್ಲಾ ಬಗೆಯ ಎಣ್ಣೆಗಳು, ತುಪ್ಪ, ಜೇನುತುಪ್ಪ, ಧಾನ್ಯ, ಸಗಣಿ ಇಂಥ ಉಪಯೋಗಕರವಾದ ವಸ್ತುಗಳನ್ನು ಈ ಮಠದಲ್ಲಿ ಸಂಗ್ರಹಿಸಿಟ್ಟಿಕೊಳ್ಳಲು ಮಾಡಿರುವ ವ್ಯವಸ್ಥೆಯನ್ನು ನಾವುಗಳು ಇಂದಿಗೂ ಸಹಾ ಕಾಣಬಹುದು. ಮಠದ ಉತ್ತರ ಭಾಗದಲ್ಲಿ 30 ಕಂಬದ ಪಣತೆಯ ಅವಶೇಷಗಳನ್ನು ಮತ್ತು ಪಶ್ಚಿಮದಲ್ಲಿ ಒಂದು ಹಗೇವು ಸಹಾ ನೋಡಬಹುದು. ಇನ್ನೂ ಇಲ್ಲಿ ಹಲವಾರು ವಿದ್ಯಾರ್ಥಿಗಳು ಇದ್ದ ಕಾರಣ ಕುಡಿಯೋಕೆ ಅಪಾರ ಪ್ರಮಾಣದ ನೀರು ಬೇಕಾಗಿದ್ದು ಅದಕ್ಕಾಗಿ ಈ ಮಠದ ಪರಿಸರದಲ್ಲಿ ಹೆಜ್ಜೆ ಹೆಜ್ಜೆಗು ಬಾವಿಗಳನ್ನು ಕಾಣಬಹುದು.
ಈ ಮಠದ ದಕ್ಷಿಣ ದಿಕ್ಕಿನಲ್ಲಿ ಇರುವ ವಿಶಾಲವಾದ ಬಯಲಿನಲ್ಲಿ ಅಂದಿನ ಕಾಲದಲ್ಲಿ ಕತ್ತಿ ಬೀಸುವ ತರಬೇತಿಯನ್ನು ನೀಡಲಾಗುತ್ತಿತ್ತು, ಇಂದಿಗೂ ಸಹಾ ಈ ಬಯಲನ್ನು ಮಠದ ಬಯಲು ಎಂದು ಜನರು ಕರೆಯುತ್ತಾರೆ. ಕತ್ತಿ ಕಲಿಸುವ ಮಠದ ಪರಿಸರದಲ್ಲಿ ಒಂದು ಸಣ್ಣ ಅಥವಾ ದೊಡ್ಡ ಪ್ರಮಾಣದ ಕಬ್ಬಿಣದ ಕುಲುಮೆ ಇರಲೇಬೇಕು ಹಾಗಾಗಿ ಇದಕ್ಕೆ ಸಾಕ್ಷಿಯನ್ನು ಹುಡುಕುವಾಗ ನಮಗೆ ಆ ಮಠದ ಉತ್ತರ ದಿಕ್ಕಿನ ಬಯಲಿನಲ್ಲಿ ಕಬ್ಬಿಣದ ಕಿಟ್ಟದ ಅವಶೇಷಗಳು ದೊರಕಿದವು.
ಈ ಮಠದ ಮದ್ಯೆ ಭಾಗದಲ್ಲಿ ಇರುವ ಆ ಮಹತ್ತರ ಕಟ್ಟಡ ಏನು ಎಂದು ಶೋಧಿಸುವಾಗ ನಮ್ಮ ಕಣ್ಣಿಗೆ ಬಿದ್ದಿದ್ದು ಆ ಕಂಬಗಳ (ಎಲ್ಲಾ ಕಂಬಗಳು) ಮೇಲೆ ಕೆತ್ತಿರುವ ನಂದಿಯ (ಬಸವಣ್ಣ) ಉಬ್ಬು ಶಿಲ್ಪ. ಇನ್ನೂ ಈ ನಂದಿಯು ಕೂತಿರುವ ಭಂಗಿಯನ್ನು ನೋಡಿದ ಕೂಡಲೇ ಇದು ಶಿವಗಣ ಸೂಚಕ ನಂದಿ ಎಂದು ಗೋಚರಿಸಿತು. ನಂದಿ ಶಿಲ್ಪಗಳು ದೇವಾಲಯ, ವೀರಗಲ್ಲುಗಳಲ್ಲಿ ಮತ್ತು ಸಮಾಧಿಗಳಲ್ಲಿ ಬಿಂಬಿಸಲಾಗಿರುತ್ತದೆ, ಶಿವನ ಮುಂದೆ ಇರುವ ನಂದಿ ಮತ್ತು ಸಮಾಧಿ ಸೂಚಕ ನಂದಿಯ ಶಿಲ್ಪ ಭಿನ್ನವಾಗಿರುತ್ತದೆ. ಕುಳಿತ ನಂದಿಯ ಶಿಲ್ಪದ ಮುಂದಿನ ಕಾಲುಗಳನ್ನು ಬಿಂಬಿಸುವ ರೀತಿಯಲ್ಲಿ ವ್ಯತ್ಯಾಸ ಇರುತ್ತದೆ. ಸಮಾಧಿ ಸೂಚಕ ನಂದಿಯ ಬಲಗಾಲು ನೆಲಕ್ಕೆ ಊರಿದ್ದು ಇದನ್ನು ನಾವು ಮಡಿಕೇರಿಯ ರಾಜರ ಗದ್ದುಗೆಗಳ ಮುಂದೆ ಇರುವ ನಂದಿ, ಬಿದನೂರಿನ ಕೊಪ್ಪಲು ಮಠದಲ್ಲಿ ಇರುವ ನಂದಿ, ಕಿತ್ತೂರಿನ ದೇಸಾಯಿಗಳ ಸಮಾಧಿಯ ಲಲಾಟ ಬಿಂಬದಲ್ಲಿ ಇರುವ ನಂದಿ, ಬನವಾಸಿ ಮಧುಕೇಶ್ವರ ದೇವಾಲಯದ ಅಂತರಾಳದಲ್ಲಿರುವ ನಂದಿಯಲ್ಲಿ ಗಮನಿಸಬಹುದು. ವೀರಶೈವದ ಕೆಲವು ಪಂಗಡಗಳಲ್ಲಿ ಮೃತರ ಸಮಾಧಿ ಮಾಡುವ ಮುನ್ನ ಜಂಗಮರು ತಮ್ಮ ಬಲಗಾಲನ್ನು ಮೃತ ವ್ಯಕ್ತಿಯ ತಲೆಯ ಮೇಲೆ ಇಡುವ ಸಂಪ್ರದಾಯವನ್ನು ಇಂದಿಗೂ ಸಹಾ ನಾವು ಕಾಣಬಹುದು. ನಮ್ಮ ಅಭಿಪ್ರಾಯದಲ್ಲಿ ಈ ಮಠದ ಮಧ್ಯದಲ್ಲಿ ಇರುವ ಸ್ಥಳ ಯಾವುದಾದರೂ ವೀರಶೈವ ಗುರುಗಳ ಗದ್ದಿಗೆ ಆಗಿರಬಹುದು.
ಈ ಇತಿಹಾಸದ ಪುಟಗಳಿಂದ ಮರೆಯಾಗಿರುವ ಈ ಅದ್ಭುತವಾದ ಮಠದ ಪರಿಸರವನ್ನು ಪರಿಚಯಿಸಿದ ಬಾಂಡ್ಯ ಸಾಹುಕಾರ್ ಮನೆತನದ ಕಲ್ಯಾಣ ಗೌಡ ಬಾಂಡ್ಯ ಅವರಿಗೆ ನಾವು ಸ್ಮರಿಸಲೇ ಬೇಕು. ಇವರಿಗೆ ಇವರ ತಂದೆ ಮಲ್ಲಿಕಾರ್ಜುನ ಗೌಡ ಬಾಂಡ್ಯ ಅವರಿಗೆ ಅವರ ತಂದೆ ಪುಟ್ಟಸ್ವಾಮಿ ಗೌಡ ಬಾಂಡ್ಯ ಹೀಗೆ ಅವರ ಮನೆತನದಲ್ಲಿ ತಲತಲಾಂತರದಿಂದ ಈ ಮಠದ ಅಸ್ತಿತ್ವದ ಬಗ್ಗೆ ಮಾಹಿತಿಯನ್ನು ಹಸ್ತಾಂತರಿಸುತ್ತ ಬಂದಿದ್ದರು. ಇವರು ಹೇಳುವ ಪ್ರಕಾರ ಬಿದನೂರಿನ ಪತನದ (1763) ನಂತರದಲ್ಲಿ ಈ ಮಠ ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುತ್ತದೆ, ನೋಡ ನೋಡುತ್ತಲೇ ಈ ಮಠದ ಪರಿಸರದಲ್ಲಿ ಸಹಜವಾಗಿ ಮರಗಳು ಬೆಳೆಯುತ್ತ ಇಂದು ಒಂದು ಕಿರು ಅರಣ್ಯವಾಗಿದೆ. ಇನ್ನೂ ವಿಜಯನಗರ ಕಾಲದಿಂದಲೂ ಶಸ್ತ್ರ ಅಭ್ಯಾಸ ನಡೆಸುತ್ತಿದ್ದ ಆ ಬಯಲು ಮಾತ್ರ ಹಾಗೆ ಇದ್ದು ಇಲ್ಲಿ ಯಾವುದೇ ರೀತಿಯ ಮರಗಳು ಬೆಳೆದಿಲ್ಲ ಇದಕ್ಕೆ ಪ್ರಮುಖ ಕಾರಣ ಇಲ್ಲಿಯ ಮಣ್ಣಿನ ವಿಶೇಷ ಗುಣ. ತೀರ್ಥಹಳ್ಳಿಯ ಈ ಭಾಗದಲ್ಲಿ ವಿಜಯನಗರ ಕಾಲದಿಂದಲೂ ಕತ್ತಿ ಬೀಸುವ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದ ಮನೆತನಕ್ಕೆ ವಿಜಯನಗರದ ರಾಯರು ಮತ್ತು ಇಕ್ಕೇರಿ ನಾಯಕರು ಒಂದು ವಿಶೇಷ ಸ್ಥಾನಮಾನ ಮತ್ತು ಔದಾರ್ಯವನ್ನು ನೀಡುತ್ತಿದ್ದರು. ಈ ಮನೆತನಕ್ಕೆ ವಿಜಯನಗರದ ರಾಯರು ನೀಡಿದ ಹೆಸರು ‘ಬೀಸು’ ಮನೆತನ. 1763 ರ ನಂತರದಲ್ಲಿ ಈ ಮನೆತನದವರು ಈ ಮಠದ ಪ್ರದೇಶದಿಂದ ಮೂರು ಕಿಲೋಮೀಟರ್ ದೂರದಲ್ಲಿ ನೆಲೆಸುತ್ತಾರೆ ಅದಾದ ಬಳಿಕ ಆ ಊರಿಗೆ ‘ ಬೀಸು’ ಎಂದು ನಾಮಕರಣ ವಾಗುತ್ತದೆ. ಇನ್ನೂ ಈ ಬೀಸು ಮನೆತನ ಅಂದಿನಿಂದ ಇಂದಿನವರೆಗೂ ತೀರ್ಥಹಳ್ಳಿಯ ಪ್ರಸಿದ್ಧ ಮನೆತನಗಳಲ್ಲಿ ಒಂದಾಗಿದ್ದು ಇವರ ಇತಿಹಾಸ ಇನ್ನೂ ರೋಚಕವಾಗಿದೆ.
ಈ ಮಠದ ಸುತ್ತಮುತ್ತಲಿನ ಪ್ರದೇಶದ ಇತಿಹಾಸ:
ತೀರ್ಥಹಳ್ಳಿ ತಾಲ್ಲೂಕಿನ ಆರಗ ಒಂದು ಪ್ರಮುಖ ಪ್ರಾಚೀನ ಕೇಂದ್ರ. ವಿಜಯನಗರ ಸಾಮ್ರಾಜ್ಯದ ಉಪನಗರವಾಗಿದ್ದ ಈ ಐತಿಹಾಸಿಕ ಪಟ್ಟಣ ಅಂದಿನ ಆರಗ ಹದಿನೆಂಟು ಕಂಪಣದ ಕೇಂದ್ರ ಸ್ಥಾನವಾಗಿತ್ತು. ಆರಗ ಹದಿನೆಂಟು ಕಂಪಣ, ಗುತ್ತಿ (ಚಂದ್ರಗುತ್ತಿ) ಹದಿನೆಂಟು ಕಂಪಣ ಮತ್ತು ಕರಾವಳಿಯನ್ನು ನಿಯಂತ್ರಿಸಲು ಆರಗದಲ್ಲಿ ವಿಜಯನಗರ ರಾಜಮನೆತನಕ್ಕೆ ಸೇರಿದ ಪ್ರಮುಖ ವ್ಯಕ್ತಿ ರಾಜ್ಯಪಾಲರಾಗಿ ಕಾರ್ಯ ನಿಭಾಯಿಸುತ್ತಿದ್ದರು. ಈ ಪ್ರದೇಶ ವಿಜಯನಗರ ಸಾಮ್ರಾಜ್ಯಕ್ಕೆ ಅತಿ ಹೆಚ್ಚಿನ ಆದಾಯ ತರುತ್ತಿದ್ದ ಕಾರಣಕ್ಕೆ ಈ ಪ್ರದೇಶ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಆರಗ, ತೀರ್ಥಹಳ್ಳಿ, ಹೊದಲ, ಕೋಣಂದೂರು, ಕವಲೇದುರ್ಗದ ಸುತ್ತಮುತ್ತಲಿನ ಪರಿಸರದಲ್ಲಿ ಒಮ್ಮೆ ಕ್ಷೇತ್ರ ಕಾರ್ಯಚರಣೆ ನಡೆಸಿದರೆ ಹಲವಾರು ಕಡೆಗಳಲ್ಲಿ ಕಬ್ಬಿಣದ ಕಿಟ್ಟದ ಅವಶೇಷಗಳು ದೊರೆಯುತ್ತವೆ. 1801ರಲ್ಲಿ “ಫ್ರಾನ್ಸಿಸ್ ಬುಕಾನನ್” ತೀರ್ಥಹಳ್ಳಿ ಸುತ್ತಮುತ್ತ ಓಡಾಡಿದಾಗ ಈ ಪರಿಸರದಲ್ಲಿ ಅತ್ಯುತ್ತಮ ಪ್ರಮಾಣದ ಕಬ್ಬಿಣ ಸಿಗುತ್ತಿದ್ದು ಒಂದು ಕಬ್ಬಿಣದ ಗುಡ್ಡದ ಬಗ್ಗೆ ಉಲ್ಲೇಖ ಮಾಡಿದ್ದಾನೆ. ಈ ಪ್ರದೇಶದಲ್ಲಿ ಮೊದಲು ವಿಜಯನಗರ ಕಾಲದಲ್ಲಿ ತದನಂತರ ಇಕ್ಕೇರಿ ನಾಯಕರ ಆಳ್ವಿಕೆಯ ಕಾಲದಲ್ಲಿ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಉತ್ಪಾದನಾ ಕೇಂದ್ರವಾಗಿತ್ತು. ಇಂದಿನ ಕಾಲದ ರೀತಿಯಲ್ಲೇ ಅಂದು ಸಹಾ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವ ಮೊದಲು ಅದರ ಮೇಲೆ ಪ್ರಯೋಗ ಮಾಡುತ್ತಿದ್ದು ಅದು ಸಹಾ ತೀರ್ಥಹಳ್ಳಿಯ ಈ ಪರಿಸರದಲ್ಲೇ ನಡೆಯುತ್ತಿತ್ತು. ವಿಜಯನಗರ ಮತ್ತು ಇಕ್ಕೇರಿ ನಾಯಕರ ಆಳ್ವಿಕೆಯ ಕಾಲದಲ್ಲೇ ನಮ್ಮ ಮಲೆನಾಡಿನಲ್ಲಿ ಆತ್ಮನಿರ್ಭರ ಮಂತ್ರ ಚಾಲ್ತಿಯಲ್ಲಿತ್ತು. ಅಂದು ನಮಗೆ ಬೇಕಾದ ಎಲ್ಲಾ ರೀತಿಯ ಆಯುಧಗಳನ್ನು ಸ್ವದೇಶೀ ಕಾರ್ಖಾನೆಯಲ್ಲೇ ತಯಾರಿಸುತ್ತಿದ್ದು ಅದನ್ನು ಉಪಯೋಗಿಸುವ ಕಲೆಯನ್ನು ಕಲಿಸುವ ತರಬೇತಿ ಕೇಂದ್ರಗಳು ಸಹಾ ತೀರ್ಥಹಳ್ಳಿ ಪ್ರದೇಶದಲ್ಲಿ ಇದ್ದಿದ್ದು ನಮ್ಮೆಲ್ಲರ ಹೆಮ್ಮೆಯ ವಿಷಯ. ನಮ್ಮ ಈ ಕ್ಷೇತ್ರಕಾರ್ಯಚರಣೆಯಲ್ಲಿ ನಮಗೆ ಸಹಕರಿಸಿದ್ದು ಶ್ರೀ ಕಲ್ಯಾಣ ಗೌಡ ಬಾಂಡ್ಯ, ಕಿರಣ್ ಬೀಸು ಮತ್ತು ನಿತಿನ್ ಹೇರಳೆ.
ಮಾಹಿತಿ, ಫೋಟೋ ಹಾಗೂ ಲೇಖನ:-
ಅಜಯ್ ಶರ್ಮಾ ಮತ್ತು ಪ್ರದೀಪ್ ಹೊದಲ