ಯಾದಗಿರಿ: ಇತ್ತೀಚೆಗೆ ನಾಯಕರ ಬಗ್ಗೆ ಕೀಳಾಗಿ ಮಾತನಾಡುವ, ದೇಶದ್ರೋಹಿ ಹೇಳಿಕೆ ನೀಡುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಈಗ ಮತ್ತೆ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
ದುಷ್ಕರ್ಮಿಯೊಬ್ಬಾತ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅವಾಚ್ಯ ಶಬ್ದ ಬಳಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುರಪುರದ ರಂಗಂಪೇಟೆ ನಿವಾಸಿ ಮಹಮದ್ ರಸೂಲ್ ಕಡ್ದಾರೆ ಎಂಬ ದುಷ್ಕರ್ಮಿಯೇ ಕೈಯಲ್ಲಿ ತಲ್ವಾರ್ ಹಿಡಿದು ಮೋದಿ ಹಾಗೂ ಯೋಗಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈತ ಹೈದರಾಬಾದ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿಡಿಯೋ ಅಪ್ಲೋಡ್ ಮಾಡಿದ್ದಾನೆ ಎನ್ನಲಾಗಿದೆ.
ಮೋದಿ ಪಿಎಂ ಆಗದ್ದೀನಿ ಎಂದು ನಾಟಕ ಮಾಡುತ್ತಿದ್ದಿಯಾ. ಕಾಂಗ್ರೆಸ್ ಅಧಿಕಾರದಲ್ಲಿ ಹೀಗೆಲ್ಲ ನಡೆದಿಲ್ಲ. ಮೋದಿ ಆಡಳಿತ ಸರಿಯಿಲ್ಲ. ವಾಜಪೇಯಿ ಅವರು ನಿಮ್ಮ ರೀತಿ ಕೆಟ್ಟ ಆಡಳಿತ ಮಾಡಿಲ್ಲ. ನೀನು ಟೀ ಮಾರಾಟ ಮಾಡುತ್ತಿದ್ದೆ. ಪಾರ್ಟಿ ಬಿಟ್ಟು ನನ್ನ ಜೊತೆ ಜಗಳಕ್ಕೆ ಬಾ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಮೋದಿ ನರಗಳನ್ನು ಕಟ್ ಮಾಡುತ್ತೇನೆ. ಕಾಂಗ್ರೆಸ್ ಜಿಂದಾಬಾದ್ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಸದ್ಯ ದುಷ್ಕರ್ಮಿ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ, ನಿಂದನೆ ಹಾಗೂ ಸಶಸ್ತ್ರ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.