ದಕ್ಷಿಣ ಆಫ್ರಿಕಾದ ಹಿರಿಯ ಹಾಗೂ ಅನುಭವಿ ಅಂಪೈರ್ ಮರೈಸ್ ಎರಾಸ್ಮಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಸದ್ಯ ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಅವರು ಅಂಪೈರಿಂಗ್ ಮಾಡುತ್ತಿದ್ದಾರೆ. ವರದಿಯಂತೆ ಈ ಸರಣಿಯೇ ಅವರಿಗೆ ಕೊನೆಯದ್ದಾಗಲಿದೆ. 60 ವರ್ಷದ ಮರೈಸ್ ಎರಾಸ್ಮಸ್ 18 ವರ್ಷಗಳ ಸುದೀರ್ಘ ಅಂಪೈರಿಂಗ್ ವೃತ್ತಿಜೀವನಕ್ಕೆ ಶಾಶ್ವತವಾಗಿ ವಿದಾಯ ಹೇಳಲಿದ್ದಾರೆ.
ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಬೋಲ್ಯಾಂಡ್ ಕ್ರಿಕೆಟ್ ತಂಡಕ್ಕೆ ಪ್ರಥಮ ದರ್ಜೆ ಕ್ರಿಕೆಟ್ ಆಡುವುದರಿಂದ ಹಿಡಿದು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವಿ ಅಂಪೈರ್ ಆಗುವವರೆಗೆ ಅವರು ಗುರುತಿಸಿಕೊಂಡಿದ್ದರು. 2006 ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ವಾಂಡರರ್ಸ್‌ನಲ್ಲಿ ನಡೆದ ಪಂದ್ಯ ಇವರ ಮೊದಲ ಅಂಪೈರಿಂಗ್ ಪಂದ್ಯವಾಗಿತ್ತು. 80 ಟೆಸ್ಟ್‌ಗಳು, 124 ಏಕದಿನ ಪಂದ್ಯಗಳು ಮತ್ತು 43 ಪುರುಷರ ಟಿ20 ಪಂದ್ಯಗಳ ಜೊತೆಗೆ 18 ಮಹಿಳಾ ಟಿ20 ಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ.
ಇವರು ಮೂರು ವರ್ಷ ಐಸಿಸಿ ವರ್ಷದ ಅಂಪೈರ್ ಗೌರವ ಪಡೆದಿದ್ದಾರೆ.