ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಹೈದರಾಬಾದ್ ನಡುವೆ ನಡೆದ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳಂತೆ ದಾಖಲೆಗಳು ಕೂಡ ಸುರಿಮಳೆಗೈದಿವೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತಾಗಿತ್ತು. ಏಕೆಂದರೆ, ಆಟದಲ್ಲಿ ಬರೀ ಸಿಕ್ಸರ್, ಬೌಂಡರಿಗಳ ಅಬ್ಬರವೇ ಇತ್ತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹಾಗೂ ಶಹಬಾಜ್ ಅಹ್ಮದ್ ಸ್ಫೋಟಕ ಆಟದಿಂದಾಗಿ 266 ರನ್ ಗಳಿಸಿತ್ತು. ಅಲ್ಲದೇ, ಈ ಜೋಡಿ ಮೊದಲ 6 ಓವರ್ ಗಳಲ್ಲಿ ಬರೋಬ್ಬರಿ 125 ರನ್ ಗಳಿಸಿ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಪವರ್ ಪ್ಲೇನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಮಾಡಿತು.
267 ರನ್ ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ಆರಂಭಿಕ ಮುನ್ನಡೆ ಪಡೆಯಿತು. ಡೆಲ್ಲಿ ಪರ ಆಸ್ಟ್ರೇಲಿಯಾದ ಯುವ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಈ ಐಪಿಎಲ್ನ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದರು. ಜೇಕ್ ಫ್ರೇಸರ್ ಮೆಕ್‌ಗುರ್ಕ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಅಲ್ಲದೇ, ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ ನಲ್ಲಿ ಆಡಿದ್ದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ತಲಾ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಒಟ್ಟಾರೆ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಐಪಿಎಲ್ ಇತಿಹಾಸದಲ್ಲಿಯೇ ಮೂರನೇ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. ಈ ಯುವ ಆಟಗಾರ ಈ ಪಂದ್ಯದಲ್ಲಿ ಒಟ್ಟು 65 ರನ್ ಗಳನ್ನು 18 ಎಸೆತಗಳಲ್ಲಿ ಗಳಿಸಿದ್ದಾರೆ.