ಮೈಸೂರು: ಸಿದ್ದರಾಮಯ್ಯ (Siddaramaiah) ಅವರ ಜೊತೆ ಬಂಡೆ ಇದೆ. ನನ್ನ ಜೊತೆ 136 ಜನ ಶಾಸಕರಿದ್ದಾರೆ. ಹೀಗಾಗಿ ನಿಮಗೆ ಏನೂ ಮಾಡೋಕೆ ಆಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೋಸ್ತಿ ನಾಯಕರ ವಿರುದ್ಧ ಗುಡುಗಿದ್ದಾರೆ.
ಇಲ್ಲಿನ ಮಹಾರಾಜ ಕಾಲೇಜಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಯೋಜನೆಗಳ ರಕ್ಷಣೆಗೆ ಈ ಹೋರಾಟ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಕೆಡವಲು ನೀವು ಯತ್ನಿಸುತ್ತಿದ್ದೀರಿ. ನಿಮ್ಮ ಏನೂ ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಏಕವಚನದಲ್ಲಿಯೇ ಮಾತನಾಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಜನರು ಅಧಿಕಾರಕ್ಕೆ ಬಂದ ಹಾಗೆ. ನಮ್ಮ ಜನಾಂದೋಲನ ರಾಜ್ಯದ, ಸಂವಿಧಾನದ ರಕ್ಷಣೆಗಾಗಿ. ಕುಮಾರಸ್ವಾಮಿ ನಿನ್ನ ಅಧ್ಯಕ್ಷತೆಯಲ್ಲಿ ಜೆಡಿಎಸ್ 19 ಸೀಟ್ ಗೆದ್ದಿದೆ. ಶಿವಕುಮಾರ್ ನೇತೃತ್ವದಲ್ಲಿ 136 ಸ್ಥಾನ ಗೆದ್ದಿದೆ. ಬ್ರಿಟಿಷರಿಂದ ಕಾಂಗ್ರೆಸ್ ತೆಗೆಯಲು ಆಗಲಿಲ್ಲ. ನೀನು ಎರಡು ಜನ್ಮ ಎತ್ತಿದರೂ ನಮ್ಮನ್ನ ತೆಗೆಯಲು ಆಗುವುದಿಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರ ಅಣ್ಣ ಅರಿಶಿನ ಕುಂಕುಮಕ್ಕೆ ಜಮೀನು ಕೊಟ್ಟಿದ್ದಾರೆ. ಸಾಮಾನ್ಯ ಜನರು ಅಕ್ಕ-ತಂಗಿಯರಿಗೆ ಜಮೀನು ಕೊಡುತ್ತಾರೆ. ಪಾರ್ವತಿ ಅವರಿಗೆ ಅದೇ ರೀತಿ ಕೊಟ್ಟಿದ್ದಾರೆ. ಅದು ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲ. ಡಿನೋಟಿಫೀಕೇಶನ್ ಆದ ಜಮೀನನ್ನು ಕೊಡಿ ಎಂದು ಪಾರ್ವತಿ ಕೇಳಿದ್ದಾರೆ. ಬಳಿಕ ಆ ಜಮೀನಿನ ಬದಲಿಗೆ 14 ಸೈಟ್ ಕೊಟ್ಟಿದ್ದಾರೆ. ನನ್ನಂತವನು ಇದ್ದರೆ ಆ ಹೋರಾಟವೇ ಬೇರೆ ಇತ್ತು. ಸಿದ್ದರಾಮಯ್ಯನವರು ನನ್ನ ಹೆಂಡತಿಗೆ ಜಮೀನು ನೀಡಿ ಎಂದು ಪತ್ರ ಬರೆದಿದ್ದಾರಾ? ಬಸವರಾಜ ಬೊಮ್ಮಯಿ ನಿನ್ನ ಕಾಲದಲ್ಲೇ ಸೈಟ್ ಕೊಡಲಾಗಿದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣಗಳು ಇವೆ. ನಿಮ್ಮ ಕಾಲದಲ್ಲಿ 28 ಹಗರಣಗಳು ಇವೆ. ಅವುಗಳನ್ನೆಲ್ಲ ಬೀದಿಗೆ ತರುತ್ತೇವೆ. ನಿಮ್ಮನ್ನ ಬೀದಿಗೆ ನಿಲ್ಲಿಸುತ್ತೇವೆ. ಜನರೇ ಎಲ್ಲವನ್ನೂ ತೀರ್ಮಾನ ಮಾಡ್ತಾರೆ ಎಂದು ಗುಡುಗಿದ್ದಾರೆ.