ಬೆಂಗಳೂರು : ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಬೆಂಗಳೂರಿನ 52 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ವಿಚಾರವಾಗಿ ವಿಧಾನಸೌಧದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಇಂದು ಖಾಸಗಿ ಆಸ್ಪತ್ರೆಯವರು 750 ಬೆಡ್ ಕೊಡುತ್ತಿದ್ದಾರೆ. ಹೀಗಾಗಿ ಯಾರೋ ಮೃತಪಟ್ಟಿರುವುದಕ್ಕೂ ಬೆಡ್ ಸಿಗದೇ ಇರುವುದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ, ಸೋಮವಾರ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ಮಾಡಿದ್ದೇವೆ. ಹೀಗಾಗಿ ಖಾಸಗಿ ಆಸ್ಪತ್ರೆಯವರು 2 ಸಾವಿರ ಬೆಡ್ ಗಳನ್ನು ಕೊಡಲು ಒಪ್ಪಿಕೊಂಡಿದ್ದಾರೆ. ಇಂದು 750 ಬೆಡ್ ಗಳನ್ನು ಕೊಡುತ್ತಿದ್ದಾರೆ. ಯಾರೋ ಮೃತಪಟ್ಟಿರುವುದಕ್ಕೂ ಬೆಡ್ ಸಿಗದೇ ಇರುವುದಕ್ಕೂ ಸಂಬಂಧ ಇಲ್ಲ ಎಂದು ಗರಂ ಆದರು.
ನಾವು ನಮ್ಮ ಶಕ್ತಿ ಮೀರಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಇಡೀ ದೇಶದಲ್ಲಿ ಕೊರೊನಾ ನಿಯಂತ್ರಿಸಲು ಇಷ್ಟೊಂದು ಕ್ರಮವನ್ನು ಯಾರೂ ಕೈಗೊಂಡಿಲ್ಲ, ನಾವು ಮಾಡುತ್ತಿದ್ದೇವೆ. ಇನ್ನೂ ಮಾಡಬೇಕಾದ ಕೆಲಸಗಳು ಬೇಕಾದಷ್ಟಿದೆ. ಈಗಾಗಲೇ ಖಾಸಗಿ ಆಸ್ಪತ್ರೆಯವರು ಬೆಡ್ ಕೊಡಲು ಒಪ್ಪಿಕೊಂಡಿದ್ದಾರೆ. ಇಂದು 750 ಬೆಡ್ ಕೊಡುತ್ತಿದ್ದಾರೆ ಎಂದು ಸಿಎಂ ಹೇಳಿದರು.