ಬೆಂಗಳೂರು: ಸಚಿವ ಸ್ಥಾನ ವಂಚಿತ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (B.K.Hariprasad) ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದರು. ಆದರೆ, ಈಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಾಗೂ ಸಿಎಂ ಸಿದ್ದರಾಮಯ್ಯ (Siddaramaiah) ಮಧ್ಯೆ ಮತಭೇದ ಇರಬಹುದು. ಆದರೆ ಮನಭೇದ ಇಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿ ಅವರು ಮೈಸೂರು ಸಾರ್ವಜನಿಕ ಸಭೆಗೆ ಆಹ್ವಾನಿಸಿದ್ದರು. ಹೀಗಾಗಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ನಾನು ಸಮಾವೇಶದಲ್ಲಿ ಭಾಗವಹಿಸುತ್ತೇನೆ. ಬಿಜೆಪಿ ಜೆಡಿಎಸ್ ಏನೇನು ಹೇಳಬೇಕೋ ಹೇಳುತ್ತಿದ್ದಾರೆ. ಅದಕ್ಕೆಲ್ಲ ಮೈಸೂರಲ್ಲೇ ಉತ್ತರ ನೀಡುತ್ತೇವೆ. ರಾಜಕೀಯ ಬೆಳವಣಿಗೆ ಆದಾಗ ಹೈಕಮಾಂಡ್ ನಾಯಕರು ಬರುವುದು ಸಹಜ. ಬಿಜೆಪಿ ಹೈಕಮಾಂಡ್ ಇಲ್ಲಿ ಬಂದರು ಏನೂ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ.
ವಿರೋಧ ಪಕ್ಷ ಯಾವುದೇ ಇರಲಿ. ಸರ್ಕಾರವನ್ನು ಕೆಡವುದು ಬಿಡುವುದು ಅಷ್ಟು ಸುಲಭವಲ್ಲ. ದೇವೇಗೌಡರಾಗಲಿ ಅಥವಾ ವಿಪಕ್ಷ ನಾಯಕರಾಗಲಿ ಯಾರೂ ಸನ್ಯಾಸಿಗಳಲ್ಲ. ಅವರ ರಾಜಕಾರಣ ಅವರು ಮಾಡಲಿ, ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.