ರಾಜ್ಯದಲ್ಲಿ ಸದ್ಯಕ್ಕೆ ಅನ್ ಲಾಕ್ ಇಲ್ಲ : ಆರ್. ಅಶೋಕ್ ಸುಳಿವು R. Ashok
ಬೆಂಗಳೂರು : ರಾಜ್ಯದಲ್ಲಿ ಜೂನ್ 7 ರ ಬಳಿಕ ಲಾಕ್ ಡೌನ್ ಮುಂದುವರೆಸಬೇಕೆ ಎಂಬ ಚರ್ಚೆಗಳು ಆರಂಭವಾಗಿದ್ದು, ಕಂದಾಯ ಸಚಿವ ಆರ್. ಅಶೋಕ್ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಸುಳಿವು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರ ವರದಿ ಆಧರಿಸಿ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಬೇಕೆ, ಬೇಡವೇ ಎಂಬುದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ತೀರ್ಮಾನ ಮಾಡಿದ್ದೇವೆ.
ಬೆಂಗಳೂರಿನಲ್ಲಿ 500ಕ್ಕಿಂತ ಕಡಿಮೆ ಬರಬೇಕು, ರಾಜ್ಯದಲ್ಲಿ 2 ಸಾವಿರ, ಮೂರು ಸಾವಿರಕ್ಕೂ ಕಡಿಮೆ ಬರಬೇಕು.
ಆಗ ಮಾತ್ರ ಲಾಕ್ ಡೌನ್ ಕೈ ಬಿಡುವ ಬಗ್ಗೆ ತೀರ್ಮಾನ ಮಾಡಬಹುದು ಎಂದು ಹೇಳಿದರು.
ಕೋವಿಡ್ ಸಂಬಂಧಿತ ಸಚಿವರ ಸಭೆ ನಾಳೆ ಇದೆ. ಎರಡು ದಿನಕ್ಕೊಮ್ಮೆ ಚರ್ಚೆ ಮಾಡುತ್ತೇವೆ.
ಜೂನ್ 5 ಅಥವಾ 6 ರೊಳಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.