ಮಂಡ್ಯ: ಮಂಡ್ಯ ಲೋಕಸಭಾ ಕಣ ರಂಗೇರಿದೆ. ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಟ ದರ್ಶನ್ ಹಾಗೂ ಯಶ್ ಜೋಡೆತ್ತಿನಂತೆ ಕೆಲಸ ಮಾಡಿದ್ದರು. ಆದರೆ, ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಸುಮಲತಾ ಅವರಿಗೆ ಟಿಕೆಟ್ ಸಿಗದಂತೆ ಮಾಡಿದೆ. ಆದರೆ, ದರ್ಶನ್ ಮಾತ್ರ ಕುಮಾರಸ್ವಾಮಿ ವಿರುದ್ಧವೇ ಈ ಬಾರಿಯೂ ತೊಡೆ ತಟ್ಟಿದ್ದಾರೆ.
ಈಗಾಗಲೇ ಸುಮಲತಾ ಅಂಬರೀಶ್ ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಬಾರಿ ಕೂಡ ದಳಪತಿಗಳನ್ನು ಸೋಲಿಸಲು ದರ್ಶನ್ ಮುಂದಾಗಿದ್ದು, ಕಾಂಗ್ರೆಸ್ ಗೆ ಬಲ ಬಂದಂತಾಗಿದೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಬಲಿಷ್ಠವಾಗಿದ್ದಾರೆ. ಈ ಬಾರಿ ಅವರ ವಿರುದ್ಧ ಈಜುವುದು ಕೂಡ ಅಷ್ಟು ಸುಲಭವಲ್ಲ ಎಂಬುವುದು ಕಾಂಗ್ರೆಸ್ ಗೆ ತಿಳಿದಿದ್ದರೂ ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ.
ಹೀಗಾಗಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮಂಡ್ಯ ಲೋಕಸಭಾ ಪ್ರಚಾರದ ಅಖಾಡಕ್ಕೆ ಕಾಂಗ್ರೆಸ್ ಕರೆತಂದಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆನ್ನಿಗೆ ನಿಂತಿದ್ದ ದರ್ಶನ್ ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣೇಗೌಡ ಉರ್ಫ್ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಮುಂದಾಗಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ನಂತರ ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಸಹಜವಾಗಿ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಈಗ ಬಿಜೆಪಿಯು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ದಳಪತಿಗೆ ಟಿಕೆಟ್ ನೀಡಿದೆ. ಅನಿವಾರ್ಯವಾಗಿ ಸುಮಲತಾ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಬಿಜೆಪಿ-ಜೆಡಿಎಸ್‌ಗೆ ಬೆಂಬಲ ಸಹ ಘೋಷಿಸಿದ್ದಾರೆ. ಸದ್ಯ ದರ್ಶನ್ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧವಾಗಿ ಮಂಡ್ಯದಲ್ಲಿ ಪ್ರಚಾರಕ್ಕೆ ಧುಮುಕಿದ್ದಾರೆ. ಹೀಗಾಗಿ ಇದು ಮೈತ್ರಿಗೆ ತಲೆನೋವಾಗಿ ಪರಿಣಮಿಸಿದೆ.
ದರ್ಶನ್ ಅವರು ಸ್ಟಾರ್ ಚಂದ್ರು ಅವರೊಂದಿಗೆ ಮಂಡ್ಯದಲ್ಲಿ ಇಂದಿನಿಂದ ಪ್ರಚಾರ ನಡೆಸಲಿದ್ದಾರೆ. ಈ ಬಾರಿಯೂ ದರ್ಶನ್ ಪ್ರಚಾರಕ್ಕೆ ಬೆಲೆ ಬರುತ್ತದೆಯೋ ಅಥವಾ ದಳಪತಿಗಳು ಈ ಬಾರಿ ಕಟ್ಟಿ ಹಾಕ್ತಾರಾ ಕಾಯ್ದು ನೋಡಬೇಕಿದೆ.