ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಶುಕ್ರವಾರ ಮೊದಲ ಹಂತದ ಮದಾನ ನಡೆದಿದೆ. ಆದರೆ, ಬೆಂಗಳೂರಿನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಮತದಾನವಾಗಿಲ್ಲ. ಹೀಗಾಗಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾನ (Voting)ಮಾಡದವರು ಬದುಕಿದ್ದು ಸತ್ತಂತೆ ಅಂತ ರಸ್ತೆ ಬದಿಗಳಲ್ಲಿ ಬ್ಯಾನರ್ ಹಾಕಿದ್ದಾರೆ. “ಚುನಾವಣಾ ಆಯೋಗ ಅಷ್ಟೊಂದು ಪ್ರಚಾರ ಮಾಡಿದ ನಂತರವೂ ಮತದಾನದಿಂದ ದೂರ ಉಳಿದು, ಬದುಕಿದ್ದರೂ ಸತ್ತಂತೆ ವರ್ತಿಸಿದ ಬೆಂಗಳೂರು ನಗರದ ಸುಶಿಕ್ಷತ ಸತ ಪ್ರಜೆಗಳಿಗೆ ನಮ್ಮ ಶ್ರದ್ಧಾಂಜಲಿಗಳು” ಎಂದು ಬ್ಯಾನರ್ ಹಾಕಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದ್ದಕ್ಕೆ ತೀವ್ರ ಆಕ್ರೋಶ ಕೇಳಿ ಬರುತ್ತಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಒಟ್ಟು 69.23 ರಷ್ಟು ಮತದಾನವಾಗಿದೆ. ಅತಿ ಕಡಿಮೆ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 52.81 ರಷ್ಟು ಮತದಾನವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇ. 54.42 ರಷ್ಟು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇ. 67.29 ರಷ್ಟು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ. 53.15 ರಷ್ಟು, ಚಾಮರಾಜನಗರ ಕ್ಷೇತ್ರದಲ್ಲಿ ಶೇ 76.59 ರಷ್ಟು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶೇ. 76.82 ರಷ್ಟು, ಚಿತ್ರದುರ್ಗ ಶೇ 73.11 ರಷ್ಟು, ದಕ್ಷಿಣ ಕನ್ನಡ ಶೇ 77.43 ರಷ್ಟು, ಹಾಸನ ಶೇ 77.51 ರಷ್ಟು, ಕೋಲಾರ ಶೇ 78.07 ರಷ್ಟು, ಮಂಡ್ಯ ಶೇ 81.48 ರಷ್ಟು, ಮೈಸೂರು-ಕೊಡಗು ಶೇ 70.45 ರಷ್ಟು, ತುಮಕೂರು ಶೇ 77.70 ರಷ್ಟು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ 76.06 ರಷ್ಟು ಮತದಾನವಾಗಿದೆ. ಆದರೆ, ಬೆಂಗಳೂರಿನಲ್ಲಿ ಕಡಿಮೆ ಆಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.