ದೇಶದಲ್ಲಿ ಕೊರೊನಾ ವೈರಸ್ ಆರ್ಭಟಿಸುತ್ತಿದ್ದು, ಹೆಮ್ಮಾರಿ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಕೊರೊನಾನಿಂದಾಗಿ ಜನರು ಕಂಗಾಲಾಗಿದ್ದು, ಮುಂದಿನ ಜೀವನದ ಬಗ್ಗೆ ಆತಂಕದಲ್ಲಿದ್ದಾರೆ. ಏತನ್ಮಧ್ಯೆ ಕೊರೊನಾ ವೈರಸ್ ನಿಂದ ಕುಗ್ಗಿಹೋಗಿರುವ ಭಾರತೀಯರಿಗೆ ಧೈರ್ಯ ತುಂಬಲು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಭರತ್ ಬಾಲ ಅವರು ‘ಪುನರ್ಜೀವ ಸಿಗಲಿದೆ’ ಎಂಬ ಕಿರುಚಿತ್ರವನ್ನು ತಯಾರಿ ಮಾಡಿದ್ದಾರೆ.
ಪ್ರತಿಯೊಬ್ಬರಿಗೂ ಮತ್ತೆ ಜೀವನ ಇದೆ, ಕಂಗಾಲಾಗುವುದು ಬೇಡ ಎಂಬ ಸಂದೇಶವನ್ನು ಈ ಕಿರುಚಿತ್ರದ ಮೂಲಕ ನೀಡಲಾಗಿದೆ. ಭರತ್ ಬಾಲಾ ಇದುವರೆಗೂ 500ಕ್ಕೂ ಹೆಚ್ಚು ಟಿವಿ ಕಮರ್ಷಿಯಲ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್ ಫೆಸ್ಟಿವಲ್ ನಲ್ಲಿ ಇವರು ಕಥೆ ಬರೆದಿರುವ ಸಿನಿಮಾಗಳು ಭಾಗವಹಿಸಿವೆ.
ಕೊರೊನಾ ನಿಯಂತ್ರಣಕ್ಕೆ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಈಗ ಸಡಿಲಿಕೆ ಮಾಡಲಾಗಿದೆ. ಆದರೂ ಜನಜೀವನ ಮೊದಲಿನಂತೆ ಇಲ್ಲ. ಜನರು ಇಂದಿಗೂ ಭಯದಿಂದಲೇ ಜೀವಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭರತ್ ಬಾಲಾ ಅವರ 117 ಜನರ ತಂಡ ಭಾರತ ಸರ್ಕಾರದ ಅನುಮತಿ ಪಡೆದು ದೇಶದ 14 ರಾಜ್ಯಗಳ ವಿವಿಧ ಭಾಗಗಳಿಗೆ ತೆರಳಿ ಚಿತ್ರೀಕರಣ ಮಾಡಿದೆ. ಈ ಲಾಕ್ ಡೌನ್ ನಲ್ಲಿ ಸಂಭವಿಸಿರುವ ವಿಚಾರಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್ ನಿಂದ ಅಸ್ಸಾಂವರೆಗೂ ಈ ತಂಡ ತೆರಳಿದೆ. ಮುಂಬೈನಂತ ಮಹಾನಗರದಲ್ಲಿ ಮಾಸ್ಟರ್ ಕಂಟ್ರೋಲ್ ರೂಂ ಸ್ಥಾಪಿಸಿ ಈ ತಂಡ ಹಗಲಿರುಳು ಶ್ರಮಿಸಿದೆ. ಈ ಸಮಯದಲ್ಲಿ ಭರತ್ ಬಾಲಾ ತಂಡ ಆಶ್ಚರ್ಯಗೊಳ್ಳುವಂತ ದೃಶ್ಯಗಳು ದೊರೆತಿವೆಯಂತೆ
‘ಪುನರ್ಜೀವ ಸಿಗಲಿದೆ’ ಜೂನ್ 6 ರಿಂದ 13 ವರೆಗೂ ಎಲ್ಲಾ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾಗಲಿದೆ. ಟೀಮ್ ವರ್ಚ್ಯುಯಲ್ ಭಾರತ್ ಸಂಸ್ಥೆ ಈ ಕಿರುಚಿತ್ರವನ್ನು ನಿರ್ಮಿಸಿದೆ.








