ಸಾವು ನೋವು ತಡೆಯಲು ಕಠಿಣ ಲಾಕ್ ಡೌನ್ ಅನಿವಾರ್ಯ : ಡಾ.ಸುಧಾಕರ್
ದಾವಣಗೆರೆ : ರಾಜ್ಯದಲ್ಲಿ ಕೊರೊನಾಯನ್ನು ನಿಯಂತ್ರಿಸಲು ಮೇ 24 ರ ಬಳಿಕವೂ ಕಠಿಣ ಲಾಕ್ ಡೌನ್ ಅನಿವಾರ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಹಲವು ಕಠಿಣ ನಿಯಮಗಳ ಹೊರತಾಗಿಯೂ ರಾಜ್ಯದಲ್ಲಿ ಕೊರೊನಾ ಸ್ಫೋಟ ಮುಂದುವರೆದಿದೆ. ಪ್ರತಿ ನಿತ್ಯ ನೂರಾರು ಮಂದಿ ಸೋಂಕಿತರು ರಾಜ್ಯದಲ್ಲಿ ಕೊನೆಯುಸಿರೆಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 24 ರ ಬಳಿಕ ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಅನಿವಾರ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಇಂದು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ಬಹುತೇಕ ಸಚಿವರು ಒಲವು ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಇಚ್ಛೆ ಕೂಡ ಅದೇ ಆಗಿದೆ. ಮೇ 22 ಅಥವಾ 23ರಂದು ಲಾಕ್ ಡೌನ್ ನಿರ್ಧಾರ ಪ್ರಕಟವಾಗಲಿದೆ ಎಂದರು.
ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಬೇಕು ಎಂದರೆ ರಾಜ್ಯದಲ್ಲಿ ಇನ್ನಷ್ಟು ದಿನಗಳ ಕಠಿಣ ಲಾಕ್ ಡೌನ್ ಅನಿವಾರ್ಯ. ಇದರಿಂದ ಸಾವು-ನೋವನ್ನು ತಡೆಯಬಹುದಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.







