ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಅವರಿಗೆ ಕೊರೊನಾ “ಟ್ರಬಲ್” ನೀಡುತ್ತಿದೆ. ಕೆಪಿಸಿಸಿ ಅಧ್ಯಕ್ಷಗಾದಿ ಸಿಗುತ್ತಿದ್ದಂತೆ ಹೊಸ ಹುರುಪಿನಿಂದ ಪಕ್ಷ ಸಂಘಟನೆಗೆ ಮುನ್ನುಗ್ಗುತ್ತಿದ್ದ ಡಿ.ಕೆ.ಶಿವಕುಮಾರ್ ಪಾಲಿಗೆ ಕೊರೊನಾ ಶನಿಯಂತೆ ವಕ್ಕರಿಸಿದೆ. ಈ ಹೆಮ್ಮಾರಿಯಿಂದಾಗಿ ಆರಂಭದಲ್ಲೇ ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ತಂತ್ರಗಳೆಲ್ಲಾ ಬುಡಮೇಲಾಗಿವೆ.
ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಕೊರೊನಾ ಗ್ರಹಣ!
ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಡಿ.ಕೆ ಶಿವಕುಮಾರ್ ರಾಕೆಟ್ ವೇಗದಲ್ಲಿ ಕಾರ್ಯಪ್ರೌರುತ್ತರಾಗಿದ್ದರು. ಏಪ್ರಿಲ್ ಎರಡನೇ ವಾರದಲ್ಲಿ ಬೃಹತ್ ಪದಗ್ರಹಣ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದ್ದರು. ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಇಲ್ಲವೇ ರಾಹುಲ್ ಗಾಂಧಿಯನ್ನು ಕರೆಸುವ ಪ್ಲಾನ್ ಮಾಡಿದ್ದ ಡಿಕೆಶಿ, ತಮ್ಮ ತಾಕತ್ತು ಪ್ರದರ್ಶನಕ್ಕೆ ಯೋಜನೆ ರೂಪಿಸಿದ್ದರು.
ಇದರ ಭಾಗವಾಗಿಯೇ ಡಿ.ಕೆ ಶಿವಕುಮಾರ್ ಅವರು ಪಕ್ಷದ ಎಲ್ಲಾ ನಾಯಕರನ್ನು ಖುದ್ದು ಭೇಟಿ ಮಾಡಿ ಸಹಕಾರ ಕೋರಿದ್ದರು. ಪಟ್ಟಾಭಿಷೇಕವಾಗುತ್ತಿದ್ದಂತೆ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಿ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಅವರು ಪ್ಲಾನ್ ಮಾಡಿಕೊಂಡಿದ್ದರು. ” ಪಕ್ಷದ ಕಾರ್ಯಕರ್ತರೇ ನಮ್ಮ ಆಸ್ತಿ. ನಮ್ಮಲ್ಲಿ ವ್ಯಕ್ತಿ ಪೂಜೆ ಇಲ್ಲ.. ಕಾಂಗ್ರೆಸ್ ಹಿರಿಯ ನಾಯಕರನ್ನು ಮತ್ತೆ ಪಕ್ಷದ ಕಚೇರಿಗೆ ಕರೆದುಕೊಂಡು ಬರುತ್ತೇನೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ಎಲ್ಲಾ ಶಾಸಕರ ಬಾಗಿಲಿಗೆ ನಾನೇ ಹೋಗುತ್ತೇನೆ” ಎಂಬ ಡಿಕೆಶಿ ಅವರ ಹೇಳಿಕೆಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಕ್ಷೇತ್ರಾವಾರು ಪ್ರವಾಸ ಮಾಡಿ ಶಾಸಕರನ್ನು ಭೇಟಿ ಮಾಡಿ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ತುಂಬುವುದು ಡಿ.ಕೆ ಶಿವಕುಮಾರ್ ಉದ್ದೇಶವಾಗಿತ್ತು. ಈ ಮೂಲಕ ಆರಂಭದಲ್ಲೇ ಆಡಳಿತಾರೂಢ ಬಿಜೆಪಿ ವಿರುದ್ಧ ಹೋರಾಟ ನಡೆಸುವ ಉದ್ದೇಶ ಶಿವಕುಮಾರ್ ಅವರದ್ದಾಗಿತ್ತು.
ಆದರೆ, ಕೊರೊನಾ ಮಹಾಮಾರಿಯಿಂದಾಗಿ ಜಾರಿಯಾಗಿರುವ ಲಾಕ್ ಡೌನ್‌ನಿಂದ ಆರಂಭದಲ್ಲೇ ಡಿ.ಕೆ ಶಿವಕುಮಾರ್ ಪ್ಲಾನ್ ಕೈಕೊಟ್ಟಿದೆ. ದೇಶಾದ್ಯಂತ ಏಪ್ರಿಲ್ 14ರವರೆಗೆ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಘೋಷಿಸಿದ್ದಾರೆ. ಈ ಲಾಕ್ ಡೌನ್ ವಿಸ್ತರಿಸುವ ಸಾಧ್ಯತೆಯಿದೆ ಅಂತಲೂ ಹೇಳಲಾಗ್ತಿದೆ. ಹಾಗಾಗಿ ಯಾರೂ ಎಲ್ಲೂ ಹೋಗಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಆತಂಕದಿಂದ ಹೊರಬರಲು ಕನಿಷ್ಠ ಇನ್ನೂ ಎರಡು ಮೂರು ತಿಂಗಳಾದರೂ ಬೇಕು. ಸದ್ಯ, ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ಪ್ಲಾನ್ ವಿಫಲವಾಗಿದೆ ಅನ್ನೋ ಮಾತುಗಳು ಪಕ್ಷದ ವಲಯದಲ್ಲೇ ಕೇಳಿಬರ್ತಿವೆ.








