ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಂತೆ ಪೆಟ್ರೋಲ್ ಡಿಸೇಲ್ ಬೆಲೆಯೂ ಏರಿಕೆ ಆಗುತ್ತಲೇ ಇದೆ. ಇದು ಕೊರೊನಾ ಕಾಟದಿಂದ ತತ್ತರಿಸಿ ಹೋಗಿರುವ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತಿದೆ. ಈ ಹಿನ್ನೆಲೆ ಜೂ.29 ರಂದು ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದೆ. ಕೇಂದ್ರ ಸರ್ಕಾರದ ಕಚೇರಿ ಬಳಿಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ದೇಶದಲ್ಲಿ ಪೆಟ್ರೋಲ್, ಡೀಸಲ್ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೊನಾ ಚಿಕಿತ್ಸೆಗೆ ಜನತೆಯಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಜೂ. 29ರಂದು ಪ್ರತಿಭಟನೆ ನಡೆಸಲಿದೆ. ಕೇಂದ್ರ ಸರ್ಕಾರದ ಕಚೇರಿ ಮುಂದೆ ಎರಡು ಗಂಟೆಗಳ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಜೂನ್ 30ರಿಂದ ಜುಲೈ 4ರ ವರೆಗೆ ಎಲ್ಲ ತಾಲೂಕು ಕೇಂದ್ರ ಗಳಲ್ಲಿ ಧರಣಿ ನಡೆಸಲಾಗುವುದು. ನಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದ ಡಿಕೆಶಿ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದೆ. ರಾಹುಲ್ ಗಾಂಧಿ ಎಲ್ಲ ರಾಜ್ಯಾಧ್ಯಕ್ಷರ ಜೊತೆ ಸಭೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮೌನಾಚರಣೆ ನಡೆಸಲಾಗುವುದು. ಜೂ. 27ರಂದು ಹಿರಿಯ ನಾಯಕರ ಸಭೆ ಕರೆಯಲಾಗಿದೆ ಎಂದರು.