ಚಿಕ್ಕಮಗಳೂರು: ಮಲೆನಾಡಲ್ಲಿ ವರುಣನ ರೌದ್ರ ನರ್ತನ ಮುಂದುವರೆದಿದೆ. ಕುದುರೆಮುಖ ವ್ಯಾಪ್ತಿಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಇತ್ತ ಕಳಸ ಸಮೀಪದ ಕೋಟೆ ಹೊಳೆ ಸೇತುವೆ ಸಹ ಮಹಾಮಳೆಗೆ ಮುಳುಗಡೆಯಾಗಿದೆ. ಭಾರೀ ಮಳೆಗೆ ಭದ್ರ ನದಿಗೆ ನಿರ್ಮಾಣವಾದ ಕೋಟೆ ಹೊಳೆ ಸೇತುವೆ ಜಲಾವೃತಗೊಂಡು ಕೇಳಗೋಡು, ಕಾರ್ಲೆ.ಎಸ್.ಕೆ.ಮೇಗಲ್ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಹಳೆಯದಾದ ಕೋಟೆ ಹೋಳೆ ಬ್ರಿಡ್ಜ್ ಪ್ರವಾಹಕ್ಕೆ ಮುಳುಗಡೆಯಾಗಿದೆ. ಭದ್ರಾನದಿ ಅಪಾಯದ ಮಟ್ಟ ಮೀರಿ ಮಹಾಕಾಳಿಯುಂತೆ ಹರಿಯುತ್ತಿದ್ದು, ರಭಸವಾಗಿ ಹರಿಯುತ್ತಿರುವ ನದಿ ನೀರನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.
ಮತ್ತೊಂದೆಡೆ ಕಳೆದ 4 ದಿನಗಳಿಂದ ಸುರಿಯುತ್ತಿರುವ ಮಳೆಗೆ ತುಂಗಾ, ಭದ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ಹೆಬ್ಬಾಳೆ ಸೇತುವೆ ಮೂರು ದಿನಗಳಿಂದಲೂ ಮುಳುಗಡೆಯಾಗಿ ದೆ. ಕಳಸ- ಹರನಾಡಿಗೆ ಸಂಪರ್ಕಿಸುವ ಸೇತುವೆ ಇದಾಗಿದ್ದು, ಸಂಚಾರ ಬಂದ್ ಮಾಡಲಾಗಿದೆ. ಹೆಬ್ಬಾಳೆ ಸೇತುವೆ ಮೇಲೆ ಆರು ಅಡಿ ನೀರು ಹರಿದ ಪರಿಣಾಮ ಸೇತುವೆ ಪಕ್ಕದಲ್ಲಿದ್ದ ಅಂಗಡಿ ಜಲಾವೃತವಾಗಿದೆ. ಇತ್ತ ಸಂಪರ್ಕ ಕಡಿತಗೊಂಡು ಜನರು ಪರಾದಡುವ ಪರಿಸ್ಥಿತಿ ನಿರ್ಮಾಣವಾಗಿದೆ.








