ಉಡುಪಿಯ ಪರ್ಯಾಯೋತ್ಸವ Saaksha Tv
ಉಡುಪಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯೋತ್ಸವ ಇಂದು ಜರುಗಲಿದೆ. ಈ ಸಮಯದಲ್ಲಿ ಉಡುಪಿಗೆ ಉಡುಪಿಯೇ ಸಿಂಗಾರಗೊಂಡು ಖುಷಿ ಪಡುತ್ತದೆ. ಜನವರಿ ತಿಂಗಳ ಚುಮುಚುಮು ಚಳಿಗಾಲದ ರಾತ್ರಿಯಲ್ಲಿ ಬೀದಿಯ ತುಂಬೆಲ್ಲಾ ಜಗಮಗ ಬೆಳಕು ರಾರಾಜಿಸುತ್ತಾ ಕಣ್ಮನ ಸೆಳೆಯುತ್ತದೆ.
ಈ ಪರ್ಯಾಯ ಉತ್ಸವದ ಮಹತ್ವ ಹೀಗಿದೆ: ಉಡುಪಿಯ ಖ್ಯಾತ ಧಾರ್ಮಿಕ ಸ್ಥಳವಾದ ಶ್ರೀ ಕೃಷ್ಣ ಮಠದ ಪೂಜೆ, ಅನುಷ್ಠಾನ ಹಾಗೂ ಆಡಳಿತಕ್ಕೆ ಸಂಬಂಧಿಸಿ ನಡೆಯುವ ದ್ವೈವಾರ್ಷಿಕ ಉತ್ಸವವೇ ಈ ಪರ್ಯಾಯ. ಶ್ರೀಕೃಷ್ಣ ಮಠದ ಪೂಜೆ ಮತ್ತಿತರ ಕಾರ್ಯಗಳನ್ನು ಒಬ್ಬರ ನಂತರ ಮತ್ತೊಬ್ಬರು ಯತಿಗಳಿಗೆ ವಹಿಸಿಕೊಡುವುದು. ಈಗಿನ ಪರ್ಯಾಯ ಮಠಾಧೀಶರು ಮುಂದೆ ಪರ್ಯಾಯ ಪೀಠಾರೋಹಣ ಮಾಡಲಿರುವ ಸ್ವಾಮೀಜಿಗಳಿಗೆ ಪೂಜಾ ಅಧಿಕಾರವನ್ನು, ಮಠದ ನಿರ್ವಹಣೆಯನ್ನು ಹಸ್ತಾಂತರಿಸುವುದು. ಈ ದಿನವನ್ನು ಪರ್ಯಾಯ ಎಂದು ಕರೆಯುತ್ತಾರೆ
ಅಲ್ಲದೇ ಉಡುಪಿಯಲ್ಲಿ ಅಷ್ಟ ಮಠಗಳಿವೆ. ಅವು “ಕಾಣಿಯೂರು ಮಠ, ಸೋದೆ ಮಠ, ಪುತ್ತಿಗೆ ಮಠ, ಅದಮಾರು ಮಠ, ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ ಮಠ, ಶೀರೂರು ಮಠ” ಈ ಎಂಟೂ ಮಠದ ಸ್ವಾಮೀಜಿಗಳು ಆವರ್ತದಲ್ಲಿ ಎರಡು ವರ್ಷಕ್ಕೊಮ್ಮೆ ಕೃಷ್ಣನ ಪೂಜಾ ಅಧಿಕಾರವನ್ನು ಹಸ್ತಾಂತರಿಸಿಕೊಳ್ಳುತ್ತಾರೆ. ಹೇಗೆದರೆ ಒಂದು ವೃತ್ತದಲ್ಲಿ ಎಂಟು ಮಂದಿ ಸ್ವಾಮಿಜಿಗಳು ಇದ್ದು ಕೃಷ್ಣ ಪೂಜೆಯ ಅಧಿಕಾರ, ಮಠದ ನಿರ್ವಹಣೆಯನ್ನು ಒಬ್ಬರ ನಂತರ ಒಬ್ಬರು ಎರಡು ವರ್ಷಗಳಿಗೊಮ್ಮೆ ಬದಲಾಯಿಸಿಕೊಳ್ಳುವುದು.
ಹೀಗೆ ಅದು ಒಂದು ಸುತ್ತು ಮುಗಿಸಿ ಮತ್ತೆ ಆರಂಭಿಸಿದವರ ಕೈಗೇ ಬರುತ್ತದೆ. ಮತ್ತೆ ಈ ಸುತ್ತು ಮುಂದುವರಿಯುತ್ತದೆ. ಹೀಗೆ ಎರಡು ವರ್ಷಗಳಿಗೆ ಒಮ್ಮೆ ಪರ್ಯಾಯ ಮಹೋತ್ಸವ ನಡೆಯುತ್ತದೆ. ಈ ಬಾರಿ (ಜನವರಿ 18) ರಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಯತಿಗಳು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಗಳು. ಹಾಗೂ ಪರ್ಯಾಯ ಪೀಠದಿಂದ ಇಳಿದು, ಪರ್ಯಾಯ ಹಸ್ತಾಂತರ ಮಾಡಲಿರುವ ಸ್ವಾಮೀಜಿಗಳು ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥರು.









