ಉಡುಪಿ – ಮಿಷನ್ ಆಸ್ಪತ್ರೆಯ ಎಡವಟ್ಟಿಗೆ ಮಹಿಳೆಯ ಸಾವು -ವೈದ್ಯರ ನಿರ್ಲಕ್ಷ್ಯಕ್ಕೆ ಭುಗಿಲೆದ್ದ ಆಕ್ರೋಶ
ಉಡುಪಿ, ಅಗಸ್ಟ್ 23: ಖಾಸಗಿ ಆಸ್ಪತ್ರೆಯಲ್ಲಿ ತಲೆ ನೋವು ಎಂದು ಚಿಕಿತ್ಸೆ ಪಡೆದ ವಿವಾಹಿತ ಮಹಿಳೆಯೊಬ್ಬರು ಔಷಧಿ ಪಡೆದ ಒಂದು ಗಂಟೆಯಲ್ಲಿ ಮೃತಪಟ್ಟ ಘಟನೆ ಉಡುಪಿಯ ಇಂದಿರಾನಗರದಲ್ಲಿ ವರದಿಯಾಗಿದೆ. ಉಡುಪಿ ಜಿಲ್ಲೆಯ ಇಂದಿರಾನಗರ, ಕುಕ್ಕಿಕಟ್ಟೆ ನಿವಾಸಿ ರಕ್ಷಾ(26) ಅವರು ಮೃತಪಟ್ಟ ದುರ್ದೈವಿಯಾಗಿದ್ದು, ಇವರು ಬಿಜೆಪಿ ನಗರ ಯುವ ಮೋರ್ಚ ಉಪಾಧ್ಯಕ್ಷ ಶಿವ ಪ್ರಸಾದ್ ಅವರ ಪತ್ನಿ.
ಕಳೆದ ಕೆಲವು ದಿನಗಳಿಂದ ಅವರು ಮೈಗ್ರೈ ನ್ ತಲೆನೋವಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಈ ಹಿಂದೆ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದಿದ್ದರೂ ಕೂಡ ಕಡಿಮೆಯಾಗದ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಬೆಳಗ್ಗೆ 6 ಗಂಟೆಗೆ ಸಮೀಪದ ಮಿಷನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿ ಇಂಜೆಕ್ಷನ್ ಮತ್ತು ಔಷಧಿ ಪಡೆದ ಬಳಿಕ ಅವರು ಚೇತರಿಸಿಕೊಂಡಿದ್ದು, ನಂತರ ಮನೆಗೆ ತೆರಳಿದ್ದರು.
ಮನೆಗೆ ಮರಳಿದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದ ಅವರನ್ನು ಬೆಳಗ್ಗೆ ಸುಮಾರು 8:45 ರ ವೇಳೆಯಲ್ಲಿ ಎಬ್ಬಿಸಲು ನೋಡಿದಾಗ, ಬಾಯಲ್ಲಿ ನೊರೆ ಮತ್ತು ಯಾವುದೇ ಸ್ಪಂದನೆ ಇಲ್ಲದ ಸ್ಥಿತಿಯಲ್ಲಿ ಕಾಣಿಸಿಕೊಂಡರು. ಕೂಡಲೇ ಅವರನ್ನು ಈ ಮೊದಲು ಚಿಕಿತ್ಸೆ ನೀಡಿದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಗ ಅಲ್ಲಿದ್ದ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಈ ಬಗ್ಗೆ ವಿಚಾರಿಸುವಂತೆ ಅಸಡ್ಡೆ ತೋರಿಸಿದರು. ಬಳಿಕ ಬೇರೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತಪಟ್ಟ ಬಳಿಕ ಅಲ್ಲಿ ನಡೆಸಿದ ರ್ಯಾಪಿಡ್ ಟೆಸ್ಟ್‌ನಲ್ಲಿ ಕೊರೊನಾ ನೆಗೆಟಿವ್ ಎಂಬ ವರದಿ ಬಂದಿದ್ದು, ನಂತರ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಈ ನಡುವೆ ಮಹಿಳೆಯ ಕುಟುಂಬದವರು ಚಿಕಿತ್ಸೆ ನೀಡಿದ ನಗರದ ಮಿಷನ್ ಆಸ್ಪತ್ರೆ ನಿರ್ಲ್ಯಕ್ಷದಿಂದಾಗಿ ರಕ್ಷಾ ಸಾವನ್ನಪ್ಪಿದ್ದಾಳೆ ಎಂದು ಕೇಸ್ ದಾಖಲಿಸಲು ನೋಡಿದಾಗ ಪ್ರಯೋಗಾಲಯದಿಂದ ಕೊರೋನಾ ಪರೀಕ್ಷಾ ವರದಿ ನಾಳೆ ಬರಲಿದ್ದು ಆ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಲಾಯಿತು.
ಶನಿವಾರ ಮೃತಪಟ್ಟ ಮಹಿಳೆಗೆ ಪ್ರಯೋಗಾಲಯದಲ್ಲಿ ನಡೆಸಿದ ವರದಿಯಲ್ಲಿ ಪಾಸಿಟಿವ್ ಬಂದಿರುವುದಾಗಿ ಜಿಲ್ಲಾಸ್ಪತ್ರೆ ವೈದ್ಯರು ಹೇಳಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯ ಪತಿ ಶಿವಪ್ರಸಾದ್ ಮತ್ತು ಊರಿನ ಸಾರ್ವಜನಿಕರು, ನಗರದ ಮಿಶನ್ ಆಸ್ಪತ್ರೆಯ ಇದೀಗ ನಿರ್ಲಕ್ಷ್ಯ ಮುಚ್ಚಿ ಹಾಕಲು ಆಸ್ಪತ್ರೆಗಳೆಲ್ಲ ಸೇರಿಕೊಂಡು ಲಾಬಿ ಮಾಡಿ ಕೋವಿಡ್ ಪಾಸಿಟಿವ್ ವರದಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯ ಶವಗಾರದ ಮುಂದೆ ಶನಿವಾರ ಕುಟುಂಬಸ್ಥರು, ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಕೊರೋನಾ ಪಾಸಿಟಿವ್ ವರದಿ ಬಂದಿದ್ದರೂ ಮೃತ ದೇಹವನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದಿದ್ದಾರೆ.
ಖಾಸಗಿ ಆಸ್ಪತ್ರೆಯ ವೈದ್ಯರು ನೀಡಿದ ಇಂಜೆಕ್ಷನ್ ನಿಂದ ನನ್ನ ಪತ್ನಿ ಮೃತ ಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷವನ್ನು ಮುಚ್ಚಿಹಾಕಲು ಕೊರೋನಾ ಪಾಸಿಟಿವ್ ಎಂದು ಹೇಳಲಾಗುತ್ತಿದೆ. ಮೃತಪಟ್ಟ ಬಳಿಕ ನಡೆಸಿದ ರ್ಯಾಪಿಡ್ ಟೆಸ್ಟ್‌ನಲ್ಲಿ ಕೊರೋನಾ ನೆಗೆಟಿವ್ ಎಂದು ವರದಿ ಬಂದಿದ್ದು, ನಂತರ ಪ್ರಯೋಗಾಲಯದಲ್ಲಿ ನಡೆಸಿದ ವರದಿಯಲ್ಲಿ ಪಾಸಿಟಿವ್ ಬಂದಿರುವುದಾಗಿ ಜಿಲ್ಲಾಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ. ಝೆರಾಕ್ಸ್ ಪ್ರತಿಯನ್ನು ವರದಿ ಎಂದು ಹೇಳಿ ನೀಡಿದ್ದು, ಅದರಲ್ಲಿ ಯಾವುದೇ ವೈದ್ಯರ ಸಹಿ ಇಲ್ಲ ಎಂದು ಮಹಿಳೆಯ ಪತಿ ಶಿವಪ್ರಸಾದ್ ಆರೋಪಿಸಿದ್ದಾರೆ.
ಪ್ರತಿಭಟನೆಯ ನಡುವೆ ಜಿಲ್ಲಾಸ್ಪತ್ರೆಯವರು ವೈದ್ಯರ ಸಹಿ ಇರುವ ವರದಿಯನ್ನು ಮನೆಯವರಿಗೆ ಒಪ್ಪಿಸಿದ್ದು, ಜಿಲ್ಲಾಸ್ಪತ್ರೆಯ ವಿರುದ್ಧ ಸಂಶಯ ವ್ಯಕ್ತಪಡಿಸಿದ ಮೃತರ ಕುಟುಂಬದವರು ಸ್ಥಳೀಯರು ಕೊರೋನಾ ವರದಿ ನೀಡಿರುವ ಜಿಲ್ಲಾ ಸರ್ಜನ್ ಸ್ಥಳಕ್ಕೆ ಬಂದು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ, ಈ ವರದಿಯನ್ನು ನಾವು ಒಪ್ಪುವುದಿಲ್ಲ. ಇದರಲ್ಲಿ ವೈದ್ಯರ ಷಡ್ಯಂತ್ರ ಅಡಗಿದೆ. ನಮಗೆ ಮೃತದೇಹವನ್ನು ಬಿಟ್ಟುಕೊಡಿ ಎಂದು ಒತ್ತಾಯಿಸಿದ್ದಾರೆ.