ಭಾರತೀಯ ಸೈನಿಕರಿಂದ ಅಪ್ರಚೋದಿತ ದಾಳಿ – ಚೀನಾ ಆರೋಪಗಳನ್ನು ನಿರಾಕರಿಸಿದ ಭಾರತ
ಲಡಾಖ್, ಸೆಪ್ಟೆಂಬರ್09:ಪೂರ್ವ ಲಡಾಖ್‌ನ ಭಾರತೀಯ ನಿಯಂತ್ರಣ ಪಡೆಗಳು ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ದಾಟಿ ಸೋಮವಾರ ಅಪ್ರಚೋದಿತ ದಾಳಿ ನಡೆಸಿದ್ದಾರೆ ಎಂದು ಚೀನಾ ಮಂಗಳವಾರ ಆರೋಪಿಸಿದೆ.
ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ನಾವು ಭಾರತದ ಕಡೆಯಿಂದ ಅದರ ಅಪಾಯಕಾರಿ ಕ್ರಮಗಳನ್ನು ನಿಲ್ಲಿಸುವಂತೆ ಕೇಳಿಕೊಳ್ಳುತ್ತೇವೆ, ತಕ್ಷಣವೇ ಗಡಿ ದಾಟಿದ ಯೋಧರನ್ನು ಹಿಂತೆಗೆದುಕೊಳ್ಳಿ ಮತ್ತು ಮುಂಚೂಣಿ ನೆಲೆಗಳತ್ತ ಬರಲು ಯತ್ನಿಸಿದ ಮತ್ತು ಅಪ್ರಚೋದಿತ ದಾಳಿ ನಡೆಸಿದ ಸೈನಿಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಮತ್ತು ಇದೇ ರೀತಿಯ ಘಟನೆಗಳು ಮತ್ತೆ ಸಂಭವಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಮಂಗಳವಾರ ಸಚಿವಾಲಯದ ಸಮಾವೇಶದಲ್ಲಿ ಹೇಳಿದ್ದಾರೆ.
ಆದರೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ವೆಸ್ಟರ್ನ್ ಥಿಯೇಟರ್ ಕಮಾಂಡ್ (ಡಬ್ಲ್ಯುಎಸಿ) ಮಂಗಳವಾರ ಮುಂಜಾನೆ ಮಾಡಿದ ಆರೋಪಗಳನ್ನು ಭಾರತೀಯ ಸೇನೆಯು ಈಗಾಗಲೇ ತಳ್ಳಿಹಾಕಿದೆ.
ಎಲ್‌ಎಸಿಯಲ್ಲಿ ಯಾವುದೇ ಹಂತದಲ್ಲಿಯೂ ಯಥಾಸ್ಥಿತಿ ಬದಲಾಯಿಸಲು ಭಾರತೀಯ ಸೈನ್ಯ ಪ್ರಯತ್ನಿಸಿಲ್ಲ.
ಚೀನಾ ಪಡೆಗಳೇ ಎಲ್‌ಎಸಿಯ ಮುಂಚೂಣಿ ನೆಲೆಗಳತ್ತ ಬರಲು ಪ್ರಯತ್ನಿಸಿದ್ದು, ಭಾರತದ ಪಡೆಗಳು ಅದನ್ನು ತಡೆಯಲು ಪ್ರಯತ್ನಿಸಿದೆ. ಆಗ ಚೀನೀ ಸೇನೆ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದೆ ಎಂದು ಭಾರತೀಯ ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಚೀನಾ ಸೇನೆಯ ಗಂಭೀರ ಪ್ರಚೋದನಾಕಾರಿ ಚಟುವಟಿಕೆಗಳ ಹೊರತಾಗಿಯೂ ಭಾರತೀಯ ಪಡೆಗಳು ಸಂಯಮ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸಿದೆ . ಶಾಂತಿ, ಸಂಯಮ ಕಾಪಾಡಲು ನಾವು ಬದ್ಧರಾಗಿದ್ದರೂ, ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಲು ಸಹ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದೇವೆ ಎಂದು ಸೇನೆ ಹೇಳಿದೆ.