ಮಹಿಳಾ ಪ್ರೀಯರ್ ಲೀಕ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಕೇವಲ 1 ರನ್ಗಳಿಂದ ಮಣಿಸಿದ ಯುಪಿ ವಾರಿಯರ್ಸ್ ತಂಡ ತನ್ನ 3ನೇ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬ್ಯಾಟಿಂಗ್ ಮಾಡಿ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 138 ರನ್ ಕಲೆ ಹಾಕಿತು. ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ 19.5 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 137 ರನ್ ಮಾತ್ರ ಗಳಿಸಿ 1 ರನ್ ನಿಂದ ರೋಚಕ ಸೋಲು ಕಂಡಿತು.
ಯುಪಿ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ್ತಿ ಕಿರಣ್ ನವ್ಗಿರೆ ಈ ಪಂದ್ಯದಲ್ಲೂ ವಿಫಲರಾಗಿ ಕೇವಲ 5 ರನ್ ಗಳಿಗೆ ಸುಸ್ತಾದರು. ನಾಯಕಿ ಅಲಿಸ್ಸಾ ಹೀಲಿ ಇನ್ನಿಂಗ್ಸ್ ಕೂಡ 29 ರನ್ಗಳಿಗೆ ಅಂತ್ಯಗೊಂಡಿತು. ತಾಲಿಯಾ ಮೆಕ್ಗ್ರಾತ್ 3 ರನ್ಗಳಿಗೆ ಪೆವಿಲಿಯನ್ ಸೇರಿದರು.
ಗ್ರೇಸ್ ಹ್ಯಾರಿಸ್ ಕೂಡ 14 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ದೀಪ್ತಿ ಶರ್ಮಾ 48 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 59 ರನ್ ಕಲೆಹಾಕಿದರು. ಇವರ ಆಟದಿಂದ ತಂಡ 138 ರನ್ ಕಲೆ ಹಾಕಿತು.
ಈ ಅಲ್ಪ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಕೊನೆಯ ಹಂತದಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ತಂಡಕ್ಕೆ ಆರಂಭಿಕರಿಬ್ಬರು 21 ರನ್ಗಳ ಅಲ್ಪ ಜೊತೆಯಾಟದ ಆರಂಭ ನೀಡಿದರು. ಶಫಾಲಿ ವರ್ಮಾ 15 ರನ್ ಗಳಿಸಿದರು. ಆಲಿಸ್ ಕ್ಯಾಪ್ಸಿ ಕೂಡ 15 ರನ್ ಗಳಿಗೆ ಆಟ ಮುಗಿಸಿದರು. ಜೆಮಿಮಾ ರಾಡ್ರಿಗಸ್ 17, ನಾಯಕಿ ಮೆಗ್ ಲ್ಯಾನಿಂಗ್ 46 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 60 ರನ್ ಗಳಿಸಿದರು. ಆದರೂ ತಂಡ ಗೆಲ್ಲಿಸಲು ಆಗಲಿಲ್ಲ.