ವಿಶ್ವಕಪ್ ಹೀರೋ, ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ನಲ್ಲಿ ಬ್ಯಾಟ್ ಬೀಸಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ರಂಗದಲ್ಲಿ ಕೇಳಿಬರುತ್ತಿವೆ.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಗೆ ಗುಡ್ ಬೈ ಹೇಳಿದ ಯುವಿ, ಬಿಸಿಸಿಐ ಅನುಮತಿ ಪಡೆದು ಗ್ಲೋಬಲ್ ಟಿ-20 ಲೀಗ್ ಕೆನಡಾ ಮತ್ತು ಟಿ-10 ಲೀಗ್ ಅಬುಧಾಬಿ ಎಂಬ ಎರಡು ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಅವರು ಮುಂದಿನ ಡಿಸೆಂಬರ್ 3ರಂದು ಆರಂಭವಾಗುವ ಬಿಗ್ ಬ್ಯಾಶ್ ಲೀಗ್ ನಲ್ಲೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ಅವರ ಮ್ಯಾನೇಜರ್ ಜೇಸನ್ ವಾರ್ನೆ, ನಾವು ಇದರ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಸಚಿನ್ ಗೂ ಬಂದಿತ್ತು ಆಫರ್
ಕ್ರಿಕೆಟ್ ದೇವರು ಸಚಿನ್ ಅವರನ್ನು ಸಿಡ್ನಿ ಥಂಡರ್ ತಂಡ ಬಿಗ್ ಬ್ಯಾಶ್ ಆಡುವಂತೆ 2014ರಲ್ಲಿ ಕೇಳಿತ್ತು. ಆದರೆ ಸಚಿನ್ ಅವರು ಆಡಿರಲಿಲ್ಲ.