ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ (Karnataka Maharshi Valmiki Scheduled Tribe Development Corporation Ltd) ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ(SIT) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಅಧಿಕಾರಿಗಳು ಆರೋಪಿಗಳ ಮನೆಯಿಂದ ಕೋಟಿ ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ.
3072 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ (Nagendra) ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basanagouda Daddal) ಹೆಸರಿಲ್ಲ. ಚಾರ್ಜ್ ಶೀಟ್ ನಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ಜೆ.ಬಿ.ಪದ್ಮನಾಭ, ಮಾಜಿ ಲೆಕ್ಕಾಧಿಕಾರಿ ಪರಶುರಾಮ್ ದುರ್ಗಣ್ಣನವರ್, ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ, ನೆಕ್ಕಂಟೆ ನಾಗರಾಜ್, ನಾಗರಾಜ್ ಅವರ ಸಂಬಂಧಿ ನಾಗೇಶ್ವರ ರಾವ್, ಹೈದರಾಬಾದ್‌ನ ಮಧ್ಯವರ್ತಿಗಳಾದ ಎಂ.ಚಂದ್ರಮೋಹನ್, ಗಾದಿರಾಜು ಸತ್ಯನಾರಾಯಣ ವರ್ಮಾ, ಉಡುಪಿಯ ಜಿ.ಕೆ.ಜಗದೀಶ್, ಬೆಂಗಳೂರಿನ ತೇಜ ತಮ್ಮಯ್ಯ, ಆಂಧ್ರಪ್ರದೇಶದ ಗಚ್ಚಿಬೌಲಿ ಪಿಟ್ಟಲ ಶ್ರೀನಿವಾಸ, ಹೈದರಾಬಾದ್‌ನ ಸಾಯಿತೇಜ, ಆಂಧ್ರಪ್ರದೇಶದ ಕಾಕಿ ಶ್ರೀನಿವಾಸ್ ಆರೋಪಿಗಳೆಂದು ಹೆಸರಿಸಲಾಗಿದೆ.
ಇಲ್ಲಿಯವರೆಗೆ ಆರೋಪಿಗಳಾದ ಸತ್ಯ ನಾರಾಯಣ ವರ್ಮನ ಮನೆಯಿಂದ 10.95 ಕೋಟಿ ರೂ., ಪದ್ಮನಾಭ್ ನಿವಾಸದಿಂದ 3.92 ಕೋಟಿ ರೂ., ನಾಗೇಶ್ವರ್ ನಿವಾಸದಿಂದ 1.49 ಕೋಟಿ ರೂ., ಚಂದ್ರಮೋಹನ್ ಮನೆಯಿಂದ 30 ಲಕ್ಷ ರೂ., ಜಿಪಿ ಜಗದೀಶ್ ನಿವಾಸದಿಂದ 12 ಲಕ್ಷ ರೂ. ಹಣ ಜಪ್ತಿ ಮಾಡಲಾಗಿದೆ. ಚಂದ್ರಮೋಹನ್ ಮನೆಯಿಂದ – 207 ಗ್ರಾಂ (14.90 ಲಕ್ಷ ರೂ.) ಜಿಕೆ ಜಗದೀಶ್ – 47.6 ಗ್ರಾಂ ( 3.42 ಲಕ್ಷ ರೂ.), ಸತ್ಯನಾರಾಯಣ ವರ್ಮ – 15 ಕೆಜಿ ಚಿನ್ನ (10.80 ಕೋಟಿ ರೂ.), ಒಂದು ಲ್ಯಾಂಬೋರ್ಗಿನಿ ಉರುಸ್ – 3.31 ಕೋಟಿ ರೂ. , ಮರ್ಸಿಡಿಸ್ ಬೆಂಜ್ 1.21 ಕೋಟಿ ರೂ., ಕಾಕಿ ಶ್ರೀನಿವಾಸ್ -1 ಕೆಜಿ ಚಿನ್ನ (72 ಲಕ್ಷ ರೂ.) ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.