ಫೆಬ್ರವರಿ 20ರಿಂದ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ ಶುರು..!
ಸಯ್ಯದ್ ಮುಷ್ತಾಕ್ ಆಲಿ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಿಯನ್ನು ಬಿಸಿಸಿಐ ಯಶಸ್ವಿಯಾಗಿ ಸಂಘಟಿಸಿದೆ. ಇದ್ರ ಬೆನ್ನಲ್ಲೇ ಇದೀಗ ವಿಜಯ ಹಜಾರೆ ಕ್ರಿಕೆಟ್ ಟೂರ್ನಿಗೆ ಮುಹೂರ್ತ ಫಿಕ್ಸ್ ಮಾಡಿದೆ.
ಫೆಬ್ರವರಿ 20ರಿಂದ ಮಾರ್ಚ್ 1ರವರೆಗೆ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯಗಳು ನಡೆಯಲಿವೆ. ಬಳಿಕ ಒಂದು ವಾರಗಳ ವಿಶ್ರಾಂತಿ. ಹಾಗೇ ಮಾರ್ಚ್ 8ರಿಂದ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ. ಮಾರ್ಚ್ 11 ರಂದು ಸೆಮಿಫೈನಲ್ ಹಾಗೂ ಮಾರ್ಚ್ 14ರಂದು ಫೈನಲ್ ಪಂದ್ಯಗಳು ನಡೆಯಲಿವೆ. ಈಗಾಗಲೇ ದೇಸಿ ಟಿ-ಟ್ವೆಂಟಿ ಟೂರ್ನಿಯನ್ನು ಸಂಘಟಿಸಿ ಯಶ ಸಾಧಿಸಿರುವ ಬಿಸಿಸಿಐ ಇದೀಗ 50 ಓವರ್ ಗಳ ಪಂದ್ಯವನ್ನು ಸಂಘಟಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ.
ಆದ್ರೆ ಫೈನಲ್ ಪಂದ್ಯ ಎಲ್ಲಿ ನಡೆಸುವುದು ಅನ್ನೋದರ ಬಗ್ಗೆ ಬಿಸಿಸಿಐ ಇನ್ನು ಮಾಹಿತಿ ನೀಡಿಲ್ಲ. ಇನ್ನುಳಿದಂತೆ ಸೂರತ್, ಇಂಧೋರ್, ಬೆಂಗಳೂರು, ಜೈಪುರ, ಕೊಲ್ಕತ್ತಾ ಮತ್ತು ತಮಿಳುನಾಡಿನಲ್ಲಿ ಪಂದ್ಯಗಳು ನಡೆಯಲಿವೆ.
ಈ ಟೂರ್ನಿಯೂ ಕೂಡ ಕೋವಿಡ್ ಮಾರ್ಗ ಸೂಚಿಯ ಪ್ರಕಾರವೇ ನಡೆಯಲಿದೆ. ಫೆಬ್ರವರಿ 13ರಂದು ಟೂರ್ನಿಯಲ್ಲಿ ಆಡುವ ಆಟಗಾರರಿಗೆ ಮತ್ತು ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್ ನಡೆಸಲಾಗುವುದು.
ವಿಜಯ ಹಜಾರೆ ಟೂರ್ನಿಯಲ್ಲಿ ಆಡುವ ತಂಡಗಳು
ಸೂರತ್ ನಲ್ಲಿ ಎಲೈಟ್ ಎ ಗುಂಪು – ಗುಜರಾತ್, ಛತ್ತೀಸ್ ಘಡ್, ತ್ರಿಪುರಾ, ಹೈದ್ರಬಾದ್, ಬರೋಡಾ, ಗೋವಾ
ಇಂಧೋರ್ ನಲ್ಲಿ ಎಲೈಟ್ ಬಿ ಗುಂಪು – ತಮಿಳುನಾಡು, ಪಂಜಾಬ್, ಜಾರ್ಖಂಡ್, ಮಧ್ಯ ಪ್ರದೇಶ, ವಿದರ್ಭ, ಆಂಧ್ರ ಪ್ರದೇಶ
ಬೆಂಗಳೂರಿನಲ್ಲಿ ಎಲೈಟ್ ಸಿ ಗುಂಪು – ಕರ್ನಾಟಕ, ಉತ್ತರ ಪ್ರದೇಶ, ಕೇರಳ, ಒಡಿಸ್ಸಾ, ರೈಲ್ವೇಸ್, ಬಿಹಾರ
ಜೈಪುರದಲ್ಲಿ ಎಲೈಟ್ ಡಿ ಗುಂಪು – ದೆಹಲಿ, ಮುಂಬೈ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ರಾಜಸ್ತಾನ, ಪಾಂಡಿಚೇರಿ
ಕೊಲ್ಕತ್ತಾದಲ್ಲಿ ಎಲೈಟ್ ಇ ಗುಂಪು -ಪಶ್ಚಿಮ ಬಂಗಾಳ, ಸರ್ವಿಸಸ್, ಜಮ್ಮು ಕಾಶ್ಮೀರ, ಸೌರಾಷ್ಟ್ರ, ಹರಿಯಾಣ, ಚಂಢೀಗಢ
ಪ್ಲೇಟ್ ಗುಂಪಿನ ಪಂದ್ಯಗಳು ತಮಿಳುನಾಡಿನಲ್ಲಿ ನಡೆಯಲಿದೆ. ಈ ಗುಂಪಿನಲ್ಲಿ, ಉತ್ತರ ಖಂಡ, ನಾಗಲ್ಯಾಂಡ್, ಅಸ್ಸಾಂ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ ತಂಡಗಳು ಭಾಗವಹಿಸಲಿವೆ.