ಕಿಂಗ್ ವಿರಾಟ್ ಕೊಹ್ಲಿ ಮೇಲೆ ನಿಷೇಧ ಅಸ್ತ್ರ
ಕೇಪ್ ಟೌನ್ ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಳು ವಿಕೆಟ್ ಗಳೊಂದಿಗೆ ಸೋಲುಂಡಿದೆ. ಇದರೊಂದಿಗೆ ಮೂರು ಮ್ಯಾಚ್ ಗಳ ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಂಡಿಯೂರಿದೆ.
ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯವನ್ನು ಗೆಲ್ಲಲೇಬೇಕೆಂಬ ಹಠ ಎರಡೂ ತಂಡಗಳಲ್ಲಿತ್ತು. ಆದ್ರೆ ಅಂತಿಮವಾಗಿ ದಕ್ಷಿಣ ಆಫ್ರಿಕಾ ಪರ ವಿಜಯ ಲಕ್ಷ್ಮಿ ನಿಂತಿದೆ.
ಇನ್ನು ಈ ಪಂದ್ಯದಲ್ಲಿ ಥರ್ಡ್ ಅಂಪೈರ್ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಾಯಕ ವಿರಾಟ್ ಕೊಹ್ಲಿ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್ನಲ್ಲಿ ಡೀನ್ ಎಲ್ಗರ್ ಅವರ ಎಲ್ಬಿಡಬ್ಲ್ಯೂ ಮನವಿಯ ಕುರಿತು ಮೂರನೇ ಅಂಪೈರ್ ನಿರ್ಧಾರ ವಿವಾದಾಸ್ಪದವಾಗಿತ್ತು. ಫೀಲ್ಡ್ ಅಂಪೈರ್ ಔಟ್ ನೀಡಿದ ಹೊರತಾಗಿಯೂ, ಬಾಲ್ ಟ್ರ್ಯಾಕಿಂಗ್ನಲ್ಲಿ ಚೆಂಡು ವಿಕೆಟ್ಗಳ ಮೇಲೆ ಹೋಗಿದ್ದು, ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು.
ಆಗ ಥರ್ಡ್ ಅಂಪೈರ್ ನಿರ್ಧಾರಕ್ಕೆ ಕೊಹ್ಲಿ ಅಸಹನೆ ವ್ಯಕ್ತಪಡಿಸಿದರು. ಕೊಹ್ಲಿ ಜತೆಗೆ ಅಶ್ವಿನ್, ಕೆಎಲ್ ರಾಹುಲ್ ಕೂಡ ವಿಕೆಟ್ ಮೈಕ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಅಂಪೈರ್ ಬಗ್ಗೆ ಕೊಹ್ಲಿ ಹೇಳಿದ ಮಾತುಗಳು ಗಂಭೀರವಾಗಿದ್ದು, ಐಸಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಐಸಿಸಿ ನೀತಿ ಸಂಹಿತೆ 2.8ರ ಅಡಿಯಲ್ಲಿ ಕೊಹ್ಲಿಯನ್ನು ಒಂದು ಪಂದ್ಯಕ್ಕೆ ನಿಷೇಧಿಸಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.