ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು ಬಲಿಷ್ಠ ಮುಂಬಯಿ ತಂಡಕ್ಕೆ ಸೋಲಿನ ರುಚಿ ತೋರಿಸಿದೆ.
ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ ಆಯ್ದುಕೊಂಡಿತ್ತು. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಮುಂಬಯಿ ಇಂಡಿಯನ್ಸ್ ತಂಡವು ನಿಗದಿತ ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ್ದ ವಾರಿಯರ್ಸ್ ಸುಲಭವಾಗಿ ಗೆಲುವು ದಾಖಲಿಸಿತು.
ಕಿರಣ ನವಗಿರೆಯ ಅಬ್ಬರದ ಮುಂದೆ ಮುಂಬಯಿ ಬೌಲರ್ ಗಳು ಮಂಕಾದರು. ಹೀಗಾಗಿ ಅಬ್ಬರದ ಆರಂಭ ಪಡೆದುಕೊಂಡ ಯುಪಿ ತಂಡ ಅಂತಿಮವಾಗಿ 16.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಯುಪಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕಿ ಅಲಿಸ್ಸಾ ಹೀಲಿ ಹಾಗೂ ಕಿರಣ್ ನವಗಿರೆ 91 ರನ್ಗಳ ಬೃಹತ್ ಜೊತೆಯಾಟ ನೀಡಿದರು. ಕಿರಣ್ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 57 ರನ್ ಗಳಿಸಿದರು. ನಾಯಕಿ ಹೀಲಿ ಕೂಡ 29 ಎಸೆತಗಳಲ್ಲಿ 33 ರನ್ ಕಲೆಹಾಕಿದರು. ಆ ನಂತರ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಬಂದ ಗ್ರೇಸ್ ಹ್ಯಾರಿಸ್ ಹಾಗೂ ದೀಪ್ತಿ ಶರ್ಮಾ ಕ್ರಮವಾಗಿ 38, 27 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದು ಕೊಟ್ಟರು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬಯಿ ತಂಡಕ್ಕೆ ಆರಂಭಿಕರು ಅರ್ಧಶತಕದ ಜೊತೆಯಾಟ ನೀಡಿದರು. ಹೇಲಿ ಮ್ಯಾಥ್ಯೂಸ್ 55 ರನ್, ಯಾಸ್ತಿಕಾ ಭಾಟಿಯಾ 26 ರನ್ ಗಳಿಸಿದರು. ನಾಯಕಿ ನ್ಯಾಟ್ ಸ್ಕಿವರ್-ಬ್ರಂಟ್ 19 ರನ್, ಅಮೆಲಿಯಾ ಕೆರ್ 23 ರನ್, ಪೂಜಾ ವಸ್ತ್ರಾಕರ್ 18 ರನ್, ಇಸ್ಸಿ ವಾಂಗ್ 15 ರನ್ ಬಾರಿಸಿ ತಂಡದ ಮೊತ್ತ 161 ರನ್ ಗಳಿಗೆ ಏರುವಂತೆ ಮಾಡಿದರು.