ಬೆಂಗಳೂರು : ನಾವು ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಬೇಕೆ ಹೊರತು ಸೋಂಕಿತ ವ್ಯಕ್ತಿಗಳ ವಿರುದ್ಧವಲ್ಲ. ಇದು ಗುಣಮುಖವಾಗದ ರೋಗವೂ ಅಲ್ಲ. ಸೋಂಕು ಬಂದಿದೆ ಎಂಬ ತಕ್ಷಣವೇ ಯಾರೊಬ್ಬರೂ ಹೆದರಬೇಕಾದ ಅಗತ್ಯವಿಲ್ಲ ಎಂದು ಸಚಿವ ಡಾ.ಕೆ ಸುಧಾಕರ್ ಅವರು ಜನರಲ್ಲಿ ಧೈರ್ಯ ತುಂಬಿದ್ದಾರೆ.
ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಟೈನ್ಮೆಂಟ್ ವಲಯದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲು ಮುಖ್ಯಮಂತ್ರಿ ಅವರು ಸೂಚನೆ ಕೊಟ್ಟಿದ್ದಾರೆ. ಅದರಂತೆ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರದಿಂದ ರಾಜ್ಯಕ್ಕೆ ಆಗಮಿಸಿರುವ ತಜ್ಞರ ತಂಡ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಎಲ್ಲೆಲ್ಲಿ ಕಂಟೈನ್ಮೆಂಟ್ ವಲಯಗಳಿವೆಯೋ ಅಂತಹ ಕಡೆ ಬಿಗಿಯಾದ ಕ್ರಮ ಜರುಗಿಸುವಂತೆ ಸಲಹೆ ಮಾಡಿದ್ದಾರೆ. ಇದು ಅನಿವಾರ್ಯವಾಗಿದೆ ಎಂದರು.








