ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸಮಗ್ರ ತನಿಖೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿದೆ. ಈ ನಿರ್ಧಾರವನ್ನು ಕನ್ನಡ ನಟಿ ರಮ್ಯಾ ಸ್ವಾಗತಿಸಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳ ಸಂಸ್ಥೆಯ ಮಾಜಿ ಕಾರ್ಮಿಕನೊಬ್ಬ ಪೊಲೀಸ್ ಇಲಾಖೆಯ ಮುಂದೆ ಶರಣಾಗಿ, ನೂರಾರು ಬಾಲಕಿಯರು ಮತ್ತು ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ಮಾಡಿ ಧರ್ಮಸ್ಥಳದ ವಿವಿಧೆಡೆ ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದನು. ಈ ಹೇಳಿಕೆಯು ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ.
SIT ರಚನೆ ಮತ್ತು ನಟಿ ರಮ್ಯಾ ಪ್ರತಿಕ್ರಿಯೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ, ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ, ಐಜಿ ಎಂ.ಎನ್. ಅನುಚೇತ್, ಡಿಸಿಪಿ ಸೌಮ್ಯಲತಾ ಮತ್ತು ಎಸ್ಪಿ ಜಿತೇಂದ್ರಕುಮಾರ್ ದಯಾಮ್ ಅವರನ್ನೊಳಗೊಂಡ ನಾಲ್ವರು ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ತಂಡವು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಎಲ್ಲಾ ಸಂಬಂಧಿತ ಕ್ರಿಮಿನಲ್ ಪ್ರಕರಣಗಳನ್ನು ತನಿಖೆ ಮಾಡಲಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ನಟಿ ರಮ್ಯಾ, “ರಾಜ್ಯದ ಸಿಎಂ ಧರ್ಮಸ್ಥಳ ಕುರಿತ ಆರೋಪಗಳ ತನಿಖೆಗೆ SIT ರಚನೆ ಮಾಡಿದ್ದಾರೆ. ಈ ತಂಡದಲ್ಲಿರುವ ಎಲ್ಲರೂ ದಕ್ಷ ಅಧಿಕಾರಿಗಳಾಗಿದ್ದಾರೆ. ಅವರೆಲ್ಲರಿಗೂ ತನಿಖೆ ಮಾಡಲು ಫ್ರೀಹ್ಯಾಂಡ್ ನೀಡಲಾಗುತ್ತೆ ಎಂಬ ನಂಬಿಕೆ ನನಗಿದೆ” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಹರಿದುಬರುತ್ತಿವೆ.
ಪ್ರಕರಣದ ಹಿನ್ನೆಲೆ ಮತ್ತು ಸಿಎಂ ಸಿದ್ದರಾಮಯ್ಯ ಅವರ ಪೋಸ್ಟ್
ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಧರ್ಮಸ್ಥಳದ ಕುರಿತು ಇಂತಹ ಗಂಭೀರ ಆರೋಪಗಳು ಕೇಳಿಬಂದಿರುವುದು ಭಕ್ತವೃಂದದಲ್ಲಿ ಅಚ್ಚರಿ ಮತ್ತು ಆಘಾತವನ್ನುಂಟು ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳದಲ್ಲಿ ನಡೆದಿರುವ ಎನ್ನಲಾದ ಅತ್ಯಾಚಾರ, ಕೊಲೆ ಪ್ರಕರಣಗಳು ಸದ್ದು ಮಾಡುತ್ತಿದ್ದವು. ಇತ್ತೀಚೆಗೆ ವ್ಯಕ್ತಿಯೊಬ್ಬರು ದೂರು ದಾಖಲಿಸಿದ ನಂತರ ಸರ್ಕಾರ SIT ತನಿಖೆಗೆ ಆದೇಶಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪೋಸ್ಟ್‌ನಲ್ಲಿ, “ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ, ಸ್ಥಳೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಮನುಷ್ಯನ ತಲೆಬರುಡೆ ದೊರಕಿದ ಸ್ಥಳ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬದವರ ಹೇಳಿಕೆಯನ್ನು ಪ್ರಸಾರ ಮಾಡಿವೆ. ಈ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದ್ದು, ಅವರ ಕೋರಿಕೆಯ ಮೇರೆಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ತನಿಖೆಯು ಧರ್ಮಸ್ಥಳದಲ್ಲಿ ನಡೆದಿರಬಹುದಾದ ಸತ್ಯಾಂಶಗಳನ್ನು ಹೊರತರಲು ಸಹಕಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.








