ತಿರುವನಂತಪುರಂ: ಇಸ್ರೋದ ಮಾನವ ಸಹಿತ ಗಗನಯಾನ ಯೋಜನೆಯಲ್ಲಿ ಮೂರು ದಿನ ಬಾಹ್ಯಾಕಾಶ ಪ್ರವಾಸಕ್ಕೆ ತೆರಳಲಿರುವ ನಾಲ್ವರು ಭಾರತೀಯರ ಹೆಸರನ್ನು ಪ್ರಧಾನಿ ಬಹಿರಂಗ ಮಾಡಿದ್ದಾರೆ.
ಗ್ರೂಪ್ ಕ್ಯಾಪ್ಟನ್ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್, ಹಾಗೂ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಐತಿಹಾಸಿಕ ಪ್ರಯಾಣ ಮಾಡಲಿರುವ ನಾಲ್ವರು ಯಾತ್ರಿಕರು. ಈ ನಾಲ್ವರು ಇಸ್ರೋದ ಗಗನಯಾನ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಲಿರುವ ಮೊದಲ ಬ್ಯಾಚ್ನವರು. ಐದು ವರ್ಷದ ಹಿಂದೆಯೇ ಇವರನ್ನು ಆಯ್ಕೆ ಮಾಡಲಾಗಿತ್ತು. ಇವರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತಿದೆ.
ಇಸ್ರೋದ ಗಗನಯಾನ ಐತಿಹಾಸಿಕವಾದುದು. ರಷ್ಯಾ, ಅಮೆರಿಕ ಮತ್ತು ಚೀನಾ ಬಿಟ್ಟರೆ ಬೇರೆ ಯಾವ ದೇಶಗಳು ಕೂಡ ಮಾನವರನ್ನು ಕಳುಹಿಸಿಲ್ಲ. ಭಾರತದ ರಾಕೇಶ್ ಶರ್ಮಾ 1984ರಲ್ಲಿ ಗಗನಯಾತ್ರೆ ಕೈಗೊಂಡಿದ್ದರು. ಆದರೆ, ಅವರು ಪ್ರಯಾಣಿಸಿದ್ದ ಗಗನನೌಕೆ ಭಾರತದ್ದಲ್ಲ, ರಷ್ಯಾದ್ದು. ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಮತ್ತು ರಾಜಾ ಚಾರಿ ಅವರೂ ಗಗನಯಾತ್ರೆ ಕೈಗೊಂಡ ಭಾರತೀಯ ಮೂಲದವರು. ಭಾರೀ ತೂಕದ ವಸ್ತುಗಳನ್ನು ಹೊತ್ತೊಯ್ಯಬಲ್ಲ ಎಲ್ವಿಎಂ ಎಂಕೆ-3 ಎಂಬ ರಾಕೆಟ್ನಲ್ಲಿ ಗಗನನೌಕೆಯ ಉಡಾವಣೆಯಾಗಲಿದೆ. ಭೂಮಿಯಿಂದ 400 ಕಿಮೀ ಎತ್ತರದಲ್ಲಿರುವ ಕೆಳ ಕಕ್ಷೆಗೆ ನೌಕೆಯನ್ನು ತಲುಪಿಸಲಾಗುತ್ತದೆ. ಅಲ್ಲಿ ಸಮಾರು ಮೂರು ದಿನಗಳ ಕಾಲ ಗಗನಯಾತ್ರಿಗಳು ಇರಲಿದ್ದಾರೆ. ಇಲ್ಲಿ ಸವಾಲಿನ ಕೆಲಸ ಇರುವುದು, ಭೂ ಕಕ್ಷೆ ತಲುಪಿದ ನಂತರ ಗಗನಯಾತ್ರಿಗಳನ್ನು ವಾಪಸ್ ಭೂಮಿಗೆ ತರುವ ಕಾರ್ಯದಲ್ಲಿ.