ಶಿಕ್ಷಣ ಕೇಸರೀಕರಣ ಗೊಳಿಸುವುದರಲ್ಲಿ ತಪ್ಪೇನಿದೆ : ವೆಂಕಯ್ಯ ನಾಯ್ಡು
ಹರಿದ್ವಾರ: ದೇಶದ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಶಿಕ್ಷಣ ಕೇಸರೀಕರಣಗೊಳಿಸುವುದರಲ್ಲಿ ತಪ್ಪೇನಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿನ ದೇವ್ ಸಂಸ್ಕೃತಿ ವಿಶ್ವ ವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾ ಶಾಂತಿ ಹಾಗೂ ಸಮನ್ವಯತೆ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ಸರ್ವೇ ಜನಾ ಸುಖಿನೋ ಭವಂತು ಮತ್ತು ವಸುದೈವ ಕುಟುಂಬಕಂ, ಇವು ನಮ್ಮ ಪುರಾತನ ಪಠ್ಯಗಳಲ್ಲಿ ಇದ್ದ ತತ್ವಗಳು. ಇವು ಇಂದಿಗೂ ಭಾರತದ ವಿದೇಶಾಂಗ ನೀತಿಯ ಮಾರ್ಗದರ್ಶಿ ತತ್ವಗಳಾಗಿವೆ ಎಂದು ಹೇಳಿದರು.
ದೇಶದ ಜನರು ತಮ್ಮ ವಸಾಹತುಶಾಹಿ ಮನಸ್ಥಿತಿಯನ್ನು ಬಿಟ್ಟು ತಮ್ಮ ಸ್ವಂತ ಅಸ್ಮಿತೆ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಬೇಕಿದೆ. ದೇಶದಲ್ಲಿ ವಿದೇಶಿ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಿ ಶಿಕ್ಷಣವನ್ನು ಗಣ್ಯರಿಗೆ ಸೀಮಿತಗೊಳಿಸಿದರು. ಹೀಗಾಗಿ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಹೇಳಿದ್ದಾರೆ.
ಶತಮಾನಗಳ ವಸಾಹತುಶಾಹಿ ಆಳ್ವಿಕೆಯು ನಮ್ಮನ್ನು ಕೀಳು ಜನಾಂಗವಾಗಿ ನೋಡುವುದನ್ನು ಕಲಿಸಿತು. ನಮ್ಮದೇ ಸಂಸ್ಕೃತಿ, ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಧಿಕ್ಕರಿಸಲು ನಮಗೆ ಕಲಿಸಲಾಯಿತು. ಇದು ನಮ್ಮ ರಾಷ್ಟ್ರ ಬೆಳವಣಿಗೆಯನ್ನು ನಿಧಾನಗೊಳಿಸಿತು. ವಿದೇಶಿ ಭಾಷೆಯ ಹೇರಿಕೆಯು ಶಿಕ್ಷಣವನ್ನು ಸಮಾಜದ ಒಂದು ಸಣ್ಣ ವರ್ಗಕ್ಕೆ ಸೀಮಿತಗೊಳಿಸಿತು. ಹೆಚ್ಚಿನ ಜನಸಂಖ್ಯೆಯ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ.
ನಾವು ನಮ್ಮ ಪರಂಪರೆ, ಸಂಸ್ಕೃತಿ, ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಬೇರುಗಳಿಗೆ ಹಿಂದಿರುಗಬೇಕು. ನಾವು ನಮ್ಮ ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸಬೇಕು ಮತ್ತು ತಮ್ಮ ಭಾರತೀಯ ಅಸ್ಮಿತೆಯಲ್ಲಿ ಹೆಮ್ಮೆ ಪಡೆಯುವಂತೆ ನಮ್ಮ ಮಕ್ಕಳಿಗೆ ಕಲಿಸಬೇಕು. ನಾವು ಎಷ್ಟು ಸಾಧ್ಯವೋ ಅಷ್ಟು ಭಾರತೀಯ ಭಾಷೆಗಳನ್ನು ಕಲಿಯಬೇಕು. ನಾವು ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ನಮ್ಮ ಶಾಸನಗಳ ಬಗ್ಗೆ ತಿಳಿಯಲು ನಾವು ಸಂಸ್ಕೃತವನ್ನು ಕಲಿಯಬೇಕು. ಇವೆಲ್ಲವೂ ಜ್ಞಾನದ ಖಜಾನೆಗಳಾಗಿವೆ ಎಂದಿದ್ದಾರೆ.








