ವಾಟ್ಸಾಪ್ – ಫಾರ್ವರ್ಡ್ ಮೆಸೇಜ್ ನ ಮೂಲ ಪತ್ತೆ ಹಚ್ಚಲು ‘ಸರ್ಚ್ ದಿ ವೆಬ್’
ಹೊಸದಿಲ್ಲಿ, ಅಗಸ್ಟ್ 6: ಕೋವಿಡ್ -19 ನ ಸಂಕಷ್ಟ ದ ಸಮಯದಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿವೆ . ನಕಲಿ ಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ವರ್ಷದ ಆರಂಭದಲ್ಲಿ ವಾಟ್ಸಾಪ್ ಮೆಸೇಜ್ ಅನ್ನು ಐದು ಬಳಕೆದಾರರಿಗೆ ಮಾತ್ರ ಫಾರ್ವರ್ಡ್ ಮಾಡಲು ಸೀಮಿತಗೊಳಿಸಿತ್ತು. ಅಂದರೆ ವಾಟ್ಸಾಪ್ ಬಳಕೆದಾರರಿಗೆ ಆ ಸಮಯದಲ್ಲಿ ಐದಕ್ಕೂ ಹೆಚ್ಚು ಬಳಕೆದಾರರಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಸಾಧ್ಯವಿರಲಿಲ್ಲ. ಇದೀಗ ಫಾರ್ವರ್ಡ್ ಮಾಡಿದ ಸಂದೇಶಗಳ ಮೂಲವನ್ನು ಗುರುತಿಸಲು ಫೇಸ್ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಈಗ ‘ಸರ್ಚ್ ದಿ ವೆಬ್’ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.
ಹೊಸ ವಾಟ್ಸಾಪ್ ವೈಶಿಷ್ಟ್ಯವು ಅನೇಕ ಬಾರಿ ಫಾರ್ವರ್ಡ್ ಮಾಡಲಾದ ಸಂದೇಶಗಳ ಮೂಲವನ್ನು ಹುಡುಕಲು ಸರಳವಾದ ಮಾರ್ಗವನ್ನು ಒದಗಿಸುತ್ತಿದೆ, ಅದು ಜನರು ಸ್ವೀಕರಿಸಿದ ವಿಷಯದ ಬಗ್ಗೆ ಸುದ್ದಿ ಫಲಿತಾಂಶಗಳನ್ನು ಅಥವಾ ಇತರ ಮಾಹಿತಿಯ ಮೂಲಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ವಾಟ್ಸಾಪ್ ಸಂದೇಶವನ್ನು ಸ್ವತಃ ನೋಡದೆ ಬಳಕೆದಾರರು ಅದನ್ನು ಇನ್ನೊಬ್ಬರಿಗೆ ಕಳುಹಿಸದೇ ತಮ್ಮ ಬ್ರೌಸರ್ಗಳ ಮೂಲಕ ಅಪ್-ಲೋಡ್ ಮಾಡುವ ಅವಕಾಶ ಇದರಲ್ಲಿರಲಿದೆ.
ಚಾಟ್ನಲ್ಲಿ ‘ಸರ್ಚ್ ದಿ ವೆಬ್’ ಟ್ಯಾಪ್ ಮಾಡುವ ಮೂಲಕ ಬಳಕೆದಾರರು ಈ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಪರಿಶೀಲಿಸಬಹುದಾಗಿದೆ.
ಹೊಸ ವಾಟ್ಸಾಪ್ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ
ಸರ್ಚ್ ದಿ ವೆಬ್ ಅನ್ನು ಬಳಕೆದಾರರು ಕ್ಲಿಕ್ ಮಾಡಿದಾಗ ಗೂಗಲ್ ಸರ್ಚ್ ಗೆ ಕರೆದೊಯ್ಯಲಾಗುತ್ತದೆ ಮತ್ತು ಸಂದೇಶವು ನಕಲಿ ಅಥವಾ ನಿಜವೇ ಎಂಬ ಫಲಿತಾಂಶಗಳನ್ನು ತೋರಿಸುತ್ತದೆ.
ಹೊಸ ಅಪ್ಡೇಟ್ನಲ್ಲಿ ಹಲವು ಬಾರಿ ಫಾರ್ವರ್ಡ್ ಮಾಡಲಾದ ಸಂದೇಶಗಳಿಗೆ ವಿಶೇಷ ಫಾರ್ವರ್ಡ್ ಮಾಡಲಾದ ಲೇಬಲ್ ಇರುತ್ತದೆ.
ಈ ಹೊಸ ವಾಟ್ಸಾಪ್ ವೈಶಿಷ್ಟ್ಯವನ್ನು ಬ್ರೆಜಿಲ್, ಇಟಲಿ, ಐರ್ಲೆಂಡ್, ಮೆಕ್ಸಿಕೊ, ಸ್ಪೇನ್, ಯುಕೆ ಮತ್ತು ಯುಎಸ್ನಲ್ಲಿ ಇಂದಿನಿಂದ ಪ್ರಾರಂಭಿಸಲಾಗುತ್ತಿದೆ. ಈ ವೈಶಿಷ್ಟ್ಯವು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಕುರಿತು ಯಾವುದೇ ವಿವರಗಳಿಲ್ಲ. ಅಷ್ಟೇ ಅಲ್ಲ ಒಂದೇ ಅಕೌಂಟ್ ಮೂಲಕ ಬೇರೆ ಬೇರೆ ಡಿವೈಸ್ಗಳಲ್ಲಿ ಲಾಗಿನ್ ಆಗುವ ಸೌಲಭ್ಯವನ್ನು ಕಲ್ಪಿಸುವ ಕುರಿತು ವಾಟ್ಸ್ಯಾಪ್ ಕಾರ್ಯೋನ್ಮುಖವಾಗಿದೆ.