ಟೀಮ್ ಇಂಡಿಯಾದ ಭವಿಷ್ಯದ ನಾಯಕ ಯಾರಾಗಬಹುದು..?
ಒಂದು ಮಹತ್ವದ ಸರಣಿ ಸೋತಾಗ ಭಾರತ ಕ್ರಿಕೆಟ್ ತಂಡದಲ್ಲಿ ನಾಯಕತ್ವ ಬದಲಾವಣೆಯಾಗೋದು ಮಾಮೂಲಿ. ಇದರಲ್ಲಿ ಹೊಸತೇನೂ ಇಲ್ಲ.
1932ರಲ್ಲಿ ಸಿ.ಕೆ. ನಾಯ್ಡು ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಮೊದಲ ನಾಯಕನಾಗಿ ಆಯ್ಕೆಯಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 33 ಮಂದಿ ಭಾರತ ಟೆಸ್ಟ್ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದಾರೆ. ಈ ಪಟ್ಟಿಯಲ್ಲಿ ಹಂಗಾಮಿ ನಾಯಕರನಾಗಿ ತಂಡವನ್ನು ಮುನ್ನೆಡೆಸಿದ್ದವರು ಇದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವರ್ಷ ಭಾರತ ತಂಡವನ್ನು ಮುನ್ನೆಡೆಸಿದ್ದ ಕೀರ್ತಿ ಮಹಮ್ಮದ್ ಅಜರುದ್ದೀನ್ ಗೆ ಸಲ್ಲುತ್ತದೆ.
ಹಾಗಂತ ಭಾರತ ಕ್ರಿಕೆಟ್ ತಂಡದಲ್ಲಿ ತಂಡವನ್ನು ಮುನ್ನಡೆಸುವ ಸಾಮಥ್ರ್ಯವನ್ನು ಹೊಂದಿರುವಂತಹ ಆಟಗಾರರು ಇದ್ರು. ಇದರಲ್ಲಿ ಕೆಲವರು ಯಶ ಸಾಧಿಸಿದ್ರು. ಮತ್ತೆ ಕೆಲವರು ಆಟಗಾರನಾಗಿ ಸಫಲರಾದ್ರೆ, ನಾಯಕನಾಗಿ ವೈಫಲ್ಯ ಕೂಡ ಅನುಭವಿಸಿದ್ದರು.
2000 ವರ್ಷದ ನಂತರ ಟೀಮ್ ಇಂಡಿಯಾವನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಆರು ಮಂದಿ ಮುನ್ನಡೆಸಿದ್ದಾರೆ. ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ , ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ. ರಹಾನೆ 2017ರಲ್ಲಿ ಆಸ್ಟ್ರೇಲಿಯಾ ಸರಣಿ, ಆಫಾಘಾನಿಸ್ತಾನ ಹಾಗೂ 2020ರಲ್ಲಿ ಆಸ್ಟ್ರೇಲಿಯಾ ಸರಣಿ.. ಹೀಗೆ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಇನ್ನು ವಿರಾಟ್ ಕೊಹ್ಲಿ 61 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 36 ಗೆಲುವು, 15 ಸೋಲು ಹಾಗೂ 10 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಒಟ್ಟು 60 ಟೆಸ್ಟ್ ಪಂದ್ಯಗಳಿಗೆ ನಾಯಕನಾಗಿದ್ದರು. ಇದರಲ್ಲಿ 27 ಪಂದ್ಯಗಳನ್ನು ಗೆದ್ರೆ, 18 ಪಂದ್ಯಗಳಲ್ಲಿ ಸೋಲು ಮತ್ತು 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಹಾಗೇ ಅನಿಲ್ ಕುಂಬ್ಳೆ 2007 ಮತ್ತು 2008ರಲ್ಲಿ ಟೀಮ್ ಇಂಡಿಯಾದ ಸಾರಥಿಯಾಗಿದ್ದರು. 14 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ, ಐದು ಪಂದ್ಯಗಳಲ್ಲಿ ಸೋಲು ಮತ್ತು ಆರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್, 2003ರಿಂದ 2007ರವರೆಗೆ ಒಟ್ಟು 25 ಟೆಸ್ಟ್ ಪಂದ್ಯಗಳಿಗೆ ನಾಯಕನಾಗಿದ್ದರು. ಇದರಲ್ಲಿ ಎಂಟು ಗೆಲುವು, 6 ಸೋಲು ಮತ್ತು 11 ಟೆಸ್ಟ್ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಸೌರವ್ ಗಂಗೂಲಿ.. ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿದ್ದ ಹೆಗ್ಗಳಿಕೆಗೆ ದಾದಾ ಅವರದ್ದು. 49 ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾದ ಸಾರಥಿಯಾಗಿದ್ದರು. 21 ಗೆಲುವು, 13 ಸೋಲು ಹಾಗೂ 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು.
ಇನ್ನು 1996ರಿಂದ 1999ರವರೆಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು ಸಚಿನ್ ತೆಂಡುಲ್ಕರ್. ತೆಂಡುಲ್ಕರ್ 25 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕನಾಗಿ 4ರಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. 9 ಪಂದ್ಯಗಳಲ್ಲಿ ಸೋತಿದ್ದಾರೆ. 12 ಪಂದ್ಯಗಳು ಡ್ರಾಗೊಂಡಿವೆ.
ಮೊಹಮ್ಮದ್ ಅಜರುದ್ದಿನ್ 1989ರಿಂದ 1998ರವರೆಗೆ ಭಾರತ ತಂಡದ ನಾಯಕನಾಗಿದ್ದರು. ಇದರ ನಡುವೆ ಕೆಲವೊಂದು ಸರಣಿಗಳಿಗೆ ಸಚಿನ್ ತೆಂಡುಲ್ಕರ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು . ಅಜರುದ್ದೀನ್ 47 ಟೆಸ್ಟ್ ಪಂದ್ಯಗಳಲ್ಲಿ 14ರಲ್ಲಿ ಗೆಲುವು, 14ರಲ್ಲಿ ಸೋಲು ಹಾಗೂ 19 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಅದೇನೇ ಇರಲಿ, ಟೀಮ್ ಇಂಡಿಯಾದಲ್ಲಿ ನಾಯಕನಾಗಿ ಒಬ್ಬ ಆಟಗಾರ ವಿಫಲನಾದ್ರೆ, ಮತ್ತೊಬ್ಬ ಆಟಗಾರ ತಂಡವನ್ನು ಮುನ್ನೆಡೆಸಲು ರೆಡಿಯಾಗಿರುತ್ತಿದ್ದ.
90ರ ದಶಕದ ನಂತರ ಗಮನಿಸುವುದಾದ್ರೆ, ಅಜರುದ್ದೀನ್ ಉತ್ತರಾಧಿಕಾರಿಯಾಗಿ ಸಚಿನ್ ತೆಂಡುಲ್ಕರ್, ಸಚಿನ್ ತೆಂಡುಲ್ಕರ್ ಉತ್ತರಾಧಿಕಾರಿಯಾಗಿ ಸೌರವ್ ಗಂಗೂಲಿ, ಗಂಗೂಲಿ ಉತ್ತರಾಧಿಕಾರಿಯಾಗಿ ದ್ರಾವಿಡ್, ದ್ರಾವಿಡ್ ಉತ್ತರಾಧಿಕಾರಿಯಾಗಿ ಧೋನಿ (ಅನಿಲ್ ಕುಂಬ್ಳೆ ಹಿರಿತನದ ಆಧಾರದ ಮೇಲೆ ನಾಯಕತ್ವವನ್ನು ಟೆಸ್ಟ್ ಪಂದ್ಯಕ್ಕೆ ನೀಡಲಾಗಿತ್ತು). ಧೋನಿ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿ, ಹಾಗೇ ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ತಂಡವನ್ನು ಮುನ್ನಡೆಸಿದ್ದರು.
ಆದ್ರೆ ಈಗ ಪ್ರಶ್ನೆಯೊಂದು ಎದ್ದಿದೆ. ಕೊಹ್ಲಿ, ರಹಾನೆ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಎಲ್ಲರು ಕೂಡ ಒಂದೇ ವಯಸ್ಸಿನವರು. ವಯಸ್ಸಿನಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಇದೆಯಷ್ಟೇ..
ಆದ್ರೆ ಭವಿಷ್ಯದ ಟೀಮ್ ಇಂಡಿಯಾವನ್ನು ಮುನ್ನಡೆಸುವ ಆಟಗಾರ ಯಾರು ಅನ್ನೋ ಪ್ರಶ್ನೆ ಎದುರಾಗುತ್ತಿದೆ. ಈಗೀನ ತಂಡದಲ್ಲಿರುವ ಆಟಗಾರರು ಹೆಚ್ಚು ಅಂದ್ರೆ ಮೂರು ನಾಲ್ಕು ವರ್ಷ ಆಡಬಹುದು. ಈ ಆಟಗಾರರನ್ನು ಬಿಟ್ಟು ತಂಡವನ್ನು ಯಾರು ಮುನ್ನೆಡೆಸುತ್ತಾರೆ. ಅಂತಹ ಆಟಗಾರರನ್ನು ಬಿಸಿಸಿಐ ಮತ್ತು ಆಯ್ಕೆ ಸಮಿತಿ ರೆಡಿ ಮಾಡಿದೆಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ.
ಯಾಕಂದ್ರೆ ಸದ್ಯದ ಟೀಮ್ ಇಂಡಿಯಾದಲ್ಲಿ ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಶುಬ್ಮನ್ ಗಿಲ್, ಪೃಥ್ವಿಶಾ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಆದ್ರೆ ತಂಡದಲ್ಲಿ ಸ್ಥಾನವನ್ನು ಇನ್ನೂ ಕೂಡ ಭದ್ರಪಡಿಸಿಕೊಂಡಿಲ್ಲ.
ಪೃಥ್ವಿಶಾ 19 ವಯೋಮಿತಿ ವಿಶ್ವ ಕಪ್ ಗೆದ್ದ ನಾಯಕ. ಆದ್ರೆ ತಂಡದಲ್ಲಿ ಭದ್ರವಾಗಿ ಉಳಿದುಕೊಂಡಿಲ್ಲ. ಶ್ರೇಯಸ್ ಅಯ್ಯರ್ ಭಾರತ ಎ ತಂಡವನ್ನು ಮುನ್ನಡೆಸಿದ್ದರು. ಅವರು ಕೂಡ ಏಕದಿನ ಕ್ರಿಕೆಟ್ ಗೆ ಸೀಮಿತವಾಗಿದ್ದಾರೆ. ರಿಷಬ್ ಪಂತ್ ಐಪಿಎಲ್ ನಲ್ಲಿ ಡೆಲ್ಲಿ ತಂಡವನ್ನು ಈ ಬಾರಿ ಮುನ್ನಡೆಸಿದ್ದರು. ಆದ್ರೆ ಜವಾಬ್ದಾರಿ ಅರಿತು ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಶುಬ್ಮನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ.
ಹೀಗಾಗಿ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಈಗಲೇ ಉತ್ತರ ನೀಡಲು ಸಾಧ್ಯವಿಲ್ಲ.