ಬೆಂಗಳೂರು: ನಮ್ಮ ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಲಾ ವಿದ್ಯಾರ್ಥಿ ಧ್ರುವ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಘಟನೆಗೆ ಸಂಬಂಧಪಟ್ಟಂತೆ ನ್ಯಾಷನಲ್ ಲಾ ಕಾಲೇಜ್ ಅಫ್ ಇಂಡಿಯಾ ಯುನಿವರ್ಸಿಟಿ ಹಾಸ್ಟೆಲ್ ಉಸ್ತುವಾರಿ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದು, ಯುಡಿಆರ್(ಅಸಹಜ ಸಾವು) ಪ್ರಕರಣ ದಾಖಲಿಸಲಾಗಿದೆ.
ಧ್ರುವ್ ತನ್ನ ಸಹಚರರಿಗೆ ತಿಳಿಸಿ ಹಾಸ್ಟೇಲ್ ನಿಂದ ಹೊರಗೆ ಹೋಗಿದ್ದ. ಈತ ಕಳೆದ ಮೂರು ತಿಂಗಳಿಂದ ಖಿನ್ನತೆಗಾಗಿ ಟ್ಯಾಬ್ಲೆಟ್ ಕೂಡ ತೆಗೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಸದ್ಯ ಈ ವಿಷಯವನ್ನು ಆತನ ತಂದೆ-ತಾಯಿಗೆ ಮುಟ್ಟಿಸಲಾಗಿದೆ. ಮೆಟ್ರೋ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವಿನ್ನಪ್ಪಿದ ಮೊದಲ ಪ್ರಕರಣ ಇದಾಗಿದ್ದು, ಸ್ಥಳಕ್ಕೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.