ಕೋಲಾರ : ಕೇಂದ್ರ ಸರ್ಕಾರದ ಬಳಿ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲು ಕೇಳಲು ರಾಜ್ಯದ ರಾಜಹುಲಿ ಸರ್ಕಾರಕ್ಕೆ ಹಿಂಜರಿಕೆ ಏಕೆ ಎಂದು ಕಾಂಗ್ರೆಸ್ ರಾಜ್ಯ ಮಾಧ್ಯಮ ಸಂವಹನ ವಿಭಾಗದ ಸಹ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ವ್ಯಂಗ್ಯವಾಡಿದ್ದಾರೆ.
ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್‍ಟಿ ಬಾಕಿ ಬಿಡುಗಡೆ ಮಾಡದೇ ಆರ್‍ಬಿಐನಿಂದ ಸಾಲ ಪಡೆಯಲು ಸಲಹೆ ನೀಡುವ ಮೂಲಕ ಗಣರಾಜ್ಯ ವ್ಯವಸ್ಥೆಗೆ ಧಕ್ಕೆ ಎಸಗಿದೆ. ಇಂದು ದೇಶ ಅಪಾಯಕಾರಿ ಸನ್ನಿವೇಶದಲ್ಲಿದೆ ಎಂದು ಟೀಕಿಸಿದರು. ರಾಜ್ಯ ಸರ್ಕಾರದ 2019-20ನೇ ಸಾಲಿನ ಜಿಎಸ್‍ಟಿ ಪಾಲು 31674 ಕೋಟಿರೂ, ಹಾಗೂ ಹಿಂದಿನ ಬಾಕಿ 13764 ಕೋಟಿರೂ ಇದ್ದು, ಈ ಹಣವನ್ನು ಕೇಳಲು ರಾಜ್ಯದ ರಾಜಹುಲಿ ಸರ್ಕಾರಕ್ಕೆ ಏಕೆ ಹಿಂಜರಿಕೆ. ರಾಜ್ಯ ಸರ್ಕಾರ ಜನರಿಗಾಗಿ ಆಡಳಿತ ನಡೆಸುತ್ತಿಲ್ಲ, ರಾಜ್ಯ ದಿವಾಳಿಯಾದರೂ ತನ್ನ ಪಾಲಿನ ಹಣ ಕೇಳದೇ ಕೇಂದ್ರ ಸರ್ಕಾರವನ್ನು ಮೆಚ್ಚಿಸಲು ಆಡಳಿತ ನಡೆಸಿದಂತಿದೆ, ‘ಒಂದು ದೇಶ ಒಂದು ತೆರಿಗೆ’ ಎಂದೆಲ್ಲಾ ನೀಡಿದ ಭರವಸೆ ಈಡೇರಿಲ್ಲ, ನಮ್ಮ ಪಾಲಿನ ಹಣ ನೀಡದೇ ನೀವು ಸಾಲ ಮಾಡಿ ಎಂದು ಹೇಳುವುದು ನೈತಿಕ ಜವಾಬ್ದಾರಿಯೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಸುದರ್ಶನ್ ವಾಗ್ದಾಳಿ ನಡೆಸಿದರು.
ಇದೇ ವೇಳೆ ಕೇಂದ್ರ ವಿತ್ತ ಸಚಿವೆಯ ದೇವರೇ ಕಾಪಾಡಬೇಕು ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ ಕುರಿತು ವಿತ್ತ ಸಚಿವರು ದೇವರೇ ಕಾಪಾಡಬೇಕು ಎಂದು ನೀಡಿರುವ ಹೇಳಿಕೆ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಇಂತಹ ಬೇಜಾವಬ್ದಾರಿ ಹೇಳಿಕೆ ಎಷ್ಟು ಸರಿ ಎಂದು ಪ್ರಶ್ನಿಸಿದರು. ಇಡೀ ಆರ್ಥಿಕ ವ್ಯವಸ್ಥೆ ದಿವಾಳಿಯಾಗಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕೂಡಲೇ ಸಮಗ್ರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ ಸುಧಾಕರ್, ಅಧೀವೇಶನಗಳಲ್ಲಿ ಈ ಕುರಿತು ಚರ್ಚೆಯಾಗಬೇಕು, ಜಿಎಸ್‍ಟಿ ವಿಷಯದಲ್ಲಿ ‘ಕೊಟ್ಟೋನ್ ಕೋಡಂಗಿ, ಇಸಕೊಂಡೋನು ವೀರಭದ್ರ’ ಎಂಬಂತಾಗಿದೆ ಎಂದು ಕಿಡಿಕಾರಿದರು.