ಜನತಾ ಕರ್ಫ್ಯೂಗೆ ದ.ಕ., ಉಡುಪಿ ಕೊಡಗಿ ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಜಿಲ್ಲೆಯಾದ್ಯಂತ ನಾಳೆ ಅಘೋಷಿತ ಬಂದ್ ಸಾಧ್ಯತೆ.
ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಇರಾದೆಯಿಂದ ಮಾರ್ಚ್ 22ರಂದು ‘ಜನತಾ ಕರ್ಫ್ಯೂ’ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದು, ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ತಡೆಗೆ ರವಿವಾರ ಒಂದು ದಿನದ ಜನತಾ ಕರ್ಫ್ಯೂನಲ್ಲಿ ಎಲ್ಲರೂ ಕೈಜೋಡಿಸುವಂತೆ ಶಾಸಕರು ಈಗಾಗಲೇ ಜಿಲ್ಲೆಯ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲು ಕೆನರಾ ಬಸ್ ಮಾಲಕರ ಸಂಘ, ಮಂಗಳೂರು ಸಿಟಿ ಬಸ್ ಮಾಲಕರ ಸಂಘ ನಿರ್ಧರಿಸಿದೆ. ಕೊಡಗಿನಲ್ಲೂ ಖಾಸಗಿ ಬಸ್ ಸಂಚಾರ ಇರುವುದಿಲ್ಲ ಎಂದು ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ತಿಳಿಸಿದೆ. ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಯಾವುದೇ ರೀತಿಯ ಮೀನುಗಾರಿಕಾ ವ್ಯವಹಾರ ನಡೆಯುವುದಿಲ್ಲ ಎಂದು ಮೀನುಗಾರ ಮುಖಂಡರು ತಿಳಿಸಿದ್ದು, ಜಿಲ್ಲೆಯಾದ್ಯಂತ ಹೊಟೇಲ್ ಕೂಡ ಬಂದ್ ಆಗಲಿದೆ.
ಪ್ರಯಾಣಿಕರ ಕೋರಿಕೆ ಮೇರೆಗೆ ಅಗತ್ಯವಿದ್ದರೆ ಮಾತ್ರ ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ರಸ್ತೆಗಿಳಿಯಲಿದೆ ಎಂದು ಕೆ.ಎಸ್.ಆರ್.ಟಿ.ಸಿಯ ಮಡಿಕೇರಿ ಘಟಕ ಪ್ರಕಟನೆಯಲ್ಲಿ ತಿಳಿಸಿದೆ. ಹಾಲು ಸೇರಿದಂತೆ ದಿನಬಳಕೆಯ ವಸ್ತುಗಳು ಎಂದಿನಂತೆ ದೊರಕಲಿದೆ ಎಂದು ಮೂಲಗಳು ತಿಳಿಸಿವೆ.









